ರಾಷ್ಟ್ರೀಯ

ಬೈಕ್ ಕೊಡಿಸಲಿಲ್ಲವೆಂದು ಪತ್ನಿಯ ಫೋಟೋ ಮತ್ತು ನಂಬರ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಪತಿ

Pinterest LinkedIn Tumblr


ಲಕ್ನೋ: ವ್ಯಕ್ತಿಯೊಬ್ಬ ವರದಕ್ಷಿಣೆಯಾಗಿ ಬೈಕ್ ಕೊಡಿಸಲಿಲ್ಲ ಎಂದು ಪತ್ನಿಯ ಫೋಟೋ ಮತ್ತು ನಂಬರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಪುನೀತ್ ತನ್ನ ಹೆಂಡತಿಯ ಮನೆಯವರು ವರದಕ್ಷಿಣೆಯಾಗಿ ಬೈಕ್ ಕೊಟ್ಟಿಲ್ಲವೆಂದು ಅಸಮಾಧಾನಗೊಂಡಿದ್ದನು. ಇದರಿಂದ ಪತ್ನಿಗೆ ಪ್ರತಿದಿನ ಬೈಯುತ್ತಿದ್ದನು. ದಿನ ಕಳೆದಂತೆ ಪುನೀತ್ ಪತ್ನಿಗೆ ಹೊಡೆಯಲಾರಂಭಿಸಿದನು. ಕೊನೆಗೆ ಪತಿಯ ಕಿರುಕುಳವನ್ನು ಸಹಿಸಿಕೊಳ್ಳಲಾಗದೆ ಪತ್ನಿ ತವರು ಮನೆಗೆ ಹೋಗಲು ನಿರ್ಧರಿಸಿದ್ದಳು.

ಇದರಿಂದ ಕೋಪಗೊಂಡ ಪುನೀತ್, ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆಯ ಫೋಟೋ ಮತ್ತು ಫೋನ್ ನಂಬರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಹಣ ಪಾವತಿಸಿ ಆಕೆಯೊಂದಿಗೆ ಮಾತನಾಡಿ ಹಾಗೂ ಸೆಕ್ಸ್ ಮಾಡಲು ಕೇಳಿ ಎಂದು ಅಪರಿಚಿತರೊಂದಿಗೆ ಕೇಳಿಕೊಂಡಿದ್ದಾನೆ.

ಮಹಿಳೆಗೆ ಅಪರಿಚಿತ ನಂಬರ್ ಮೂಲಕ ಫೋನ್ ಬರಲು ಶುರುವಾಗಿದೆ. ಅಲ್ಲದೇ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಇದರಿಂದ ಮಹಿಳೆ ಸೈಬರ್ ಸೆಲ್‍ಗೆ ಹೋಗಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪುನೀತ್‍ನನ್ನು ಬಂಧಿಸಿದ್ದಾರೆ.

ನಾವು ಆರೋಪಿ ಪುನೀತ್‍ನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ತಿಳಿಸಿದ್ದಾರೆ.

Comments are closed.