ಹೊಸದಿಲ್ಲಿ: ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ವೃತ್ತಿಬದುಕಿನಲ್ಲಿ ಹಲವು ಮೈಲುಗಲ್ಲುಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ಅಷ್ಟೇ ಹಳ್ಳ ಹಿಡಿದಿದೆ.
29 ವರ್ಷದ ಬಲಗೈ ವೇಗಿ ಶಮಿ ಅವರ ವಿರಕ್ತ ಪತ್ನಿ ಹಸೀನ್ ಜಹಾನ್, ಟೀಮ್ ಇಂಡಿಯಾ ವೇಗಿಗೆ ಕಾಟ ಕೊಡುವುದನ್ನು ಮುಂದುವರಿಸಿದ್ದು ಭಾನುವಾರ ಇಬ್ಬರ ಅರೆ ನಗ್ನ ಫೋಟೊ ಒಂದನ್ನು ಸೋಷಿಯಲ್ ಮೀಡಿಯಾ ವೇದಿಕೆಗಳಾದ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೊಲ್ಕತಾ ಮೂಲದ ಬಲಗೈ ವೇಗಿಯ ವಿರುದ್ಧ ಅವರ ವಿರಕ್ತ ಪತ್ನಿ 2018ರಲ್ಲಿ ಕೊಲೆ ಪ್ರಯತ್ನ, ವ್ಯಭಿಚಾರ, ದೈಹಿಕ ಹಲ್ಲೆ ಹಾಗೂ ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ಆದರೆ, ಈ ಯಾವ ದೂರುಗಳಲ್ಲಿಯೂ ಶಮಿ ತಪ್ಪಿತಸ್ತ ಎಂದು ಈವರೆಗೆ ಸಾಬೀತಾಗಿಲ್ಲ. ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ಶಮಿ ವಿರುದ್ಧ ಆಗಾಗ ಬೌನ್ಸರ್‌ಗಳನ್ನು ಹಸೀನ್ ಎಸೆಯುತ್ತಲೇ ಬಂದಿದ್ದು, ಇದೀಗ ಇಬ್ಬರ ಅರೆನಗ್ನ ಫೋಟೊ ಒಂದನ್ನು ಪ್ರಕಟಿಸಿದ್ದಾರೆ.
“ಹಿಂದೆ ನೀನು ಏನೂ ಆಗಿರದೇ ಇದ್ದ ದಿನಗಳಲ್ಲಿ ನಾನು ನಿನಗೆ ಪರಿಶುದ್ಧ ಬಂಗಾರದಂತೆ, ಈಗ ನೀನೇನೋ ಸಾಧಿಸಿದ್ದೀಯ ಎಂದ ಮೇಲೆ ನಾನು ಕಲುಶಿತಳು. ಸುಳ್ಳಿನ ಬುರ್ಖಾ(ಪರದೆ) ತೊಟ್ಟು ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಮೊಸಳೆ ಕಣ್ಣೀರು ಕೇವಲ ಕೆಲವೇ ದಿನಗಳಿಗಷ್ಟೇ ಆಸರೆ ನೀಡಬಲ್ಲದು,” ಎಂದು ಹಸೀನ್ ಟ್ವೀಟ್ ಮಾಡಿದ್ದಾರೆ.
2018ರಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದ ಹಸೀನ್ ಜಹಾನ್, ತಮ್ಮ ಪತಿ ಮೊಹಮ್ಮದ್ ಶಮಿ ಅಕ್ರಮ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್ ಫೋಟೊಗಳು ಮತ್ತು ವಾಟ್ಸ್‌ಆಪ್ ಚಾಟ್ ಎಲ್ಲವನ್ನೂ ಬಹಿರಂಗ ಪಡಿಸಿದ್ದರು. ಅಷ್ಟೇ ಅಲ್ಲದೆ ಶಮಿ ಮತ್ತು ಕುಟುಂಬದವರ ವಿರುದ್ಧ ದೈಹಿಕ ಹಲ್ಲೆಯ ದೂರನ್ನೂ ದಾಖಲಿಸಿದ್ದರು.
ಈ ವಿಚಾರ ನ್ಯಾಯಾಲಯದಲ್ಲಿ ಇತ್ಯರ್ಥ ಆಗಿದೆಯಾದರೂ, 2019ರಲ್ಲಿ ಹಸೀನ್ ಜಹಾನ್ ಒಪ್ಪಂದ ಉಲ್ಲಂಘಿಸಿದ್ದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದರು. ಅಮೋರ್ಹಾ ಜಿಲ್ಲೆಯ ಅಲಿಪುರ್ ಗ್ರಾಮದಲ್ಲಿರುವ ಶಮಿ ಅವರ ನಿವಾಸಕ್ಕೆ ತೆರಳಿದ್ದ ಹಸೀನ್ ಜಹಾನ್ ದಾಂಧಲೆ ನಡೆಸುವ ಮೂಲಕ ಪೊಲೀಸರ ಅತಿಥಿಯಾಗಿದ್ದರು.
ಕಳೆದ ವರ್ಷ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿರುವ ಶಮಿ, ಭಾರತ ತಂಡದ ಪರ ಈವರೆಗೆ 49 ಟೆಸ್ಟ್, 77 ಒಡಿಐ ಮತ್ತು 11 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 180, 144 ಮತ್ತು 12 ವಿಕೆಟ್‌ಗಳನ್ನು ಪಡೆದಿದ್ದಾರೆ.
Comments are closed.