ನವದೆಹಲಿ: ದೇಶಾದ್ಯಂತ ತನ್ನ ಕದಂಬ ಬಾಹುಗಳನ್ನು ಚಾಚುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ಇದೀಗ ಗ್ರಾಮೀಣ ಭಾರತವನ್ನೂ ಆಕ್ರಮಿಸಿತೇ ಎಂಬ ಆತಂಕ ಇದೀಗ ವ್ಯಕ್ತವಾಗುತ್ತಿದೆ.
ಇಂತಹುದೊಂದು ಆತಂಕಕ್ಕೆ ಕಾರಣವಾಗಿರುವುದು ಇತ್ತೀಚೆಗೆ ವರದಿಯಾಗುತ್ತಿರುವ ಕೊರೋನಾ ಹೊಸ ಸೋಂಕಿತರ ಮಾಹಿತಿ. ಇಷ್ಟು ದಿನ ದೇಶದ ಪ್ರಮುಖ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ಸೋಂಕು ನಿಧಾನವಾಗಿ ದೇಶದ ಗ್ರಾಮೀಣ ಭಾಗಕ್ಕೂ ಪಸರಿಸುತ್ತಿದ್ದು, ಕಳೆದೊಂದು ವಾರದಲ್ಲಿ ಪತ್ತೆಯಾದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.25ಕ್ಕೂ ಅಧಿಕ ಪ್ರಕರಣಗಳು ದೇಶದ ಗ್ರಾಮೀಣ ಭಾಗದಿಂದ ವರದಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯವರೆಗೂ ಕೊರೋನಾ ಮುಕ್ತ ಮತ್ತು ಹಸಿರು ವಲಯಗಳು ಎಂದು ಹೇಳಲಾಗುತ್ತಿದ್ದ ಜಿಲ್ಲೆ ಮತ್ತು ಪ್ರದೇಶಗಳಿಂದಲೇ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿರುವುದು ಭಾರತದಲ್ಲಿ ಕೊರೋನಾ ಸಮುದಾಯ ಹಂತಕ್ಕೆ ತಲುಪಿದೆಯೇ ಎಂಬ ಭೀತಿಗೆ ಕಾರಣವಾಗಿದೆ.
ಮೇ 1ರ ಬಳಿಕ ಮಧ್ಯ ಪ್ರದೇಶದಲ್ಲಿ ಕೊರೋನಾ ಮುಕ್ತ ಎಂದು ಹೇಳಲಾಗಿದ್ದ 8 ಜಿಲ್ಲೆಗಳಲ್ಲಿ ಇದೀಗ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಒಟ್ಟಾರೆ ಪ್ರಕರಣಗಳ ಪೈಕಿ ನೀಮುಚ್ (27 ಪ್ರಕರಣಗಳು), ಅನುಪ್ಪೂರ್ (3), ಸತ್ನಾ (5), ಭಿಂದ್ (4), ಗುಣ (1), ಹಬುವಾ (2), ಪನ್ನಾ (1) ಮತ್ತು ಸೆಹೋರ್ (4), ಸಿಯೋನಿ (1), ಮಾಂಡ್ಲಾ (1) ಮತ್ತು ಸಿಧಿ (1), ಈ ಎಲ್ಲಾ ಪ್ರದೇಶಗಳೂ ಮಧ್ಯ ಪ್ರದೇಶದ ಪ್ರಮುಖ ಗ್ರಾಮೀಣ ಪ್ರದೇಶವಾಗಿದೆ. ಮಧ್ಯ ಪ್ರದೇಶದ ಸಾತ್ನಾದಲ್ಲಿ ಓರ್ವ ಸೋಂಕಿತ ಸಾವನ್ನಪ್ಪಿದ್ದ. ಗುಜರಾತ್ ನಿಂದ ಮಧ್ಯ ಪ್ರದೇಶಕ್ಕೆ ಆಗಮಿಸಿದ್ದ ವಲಸೆ ಕಾರ್ಮಿಕ ಮತ್ತು ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು.
ಈ ಪೈಕಿ ನೀಮುಚ್ ಮದ್ಯ ಪ್ರದೇಶ ಮತ್ತು ರಾಜಸ್ಥಾನದ ಗಡಿ ಭಾಗವಾಗಿದ್ದು, ಹೀಗಾಗಿ ಇದು ರಾಜಸ್ಥಾನದ ಗ್ರಾಮೀಣ ಭಾಗಕ್ಕೂ ಆತಂಕ ತಂದೊಡ್ಡಿದೆ. ಇಲ್ಲಿ ಮೇ 3ರಂದು ಮೊದಲ ಸೋಂಕು ಪ್ರಕರಣ ಪತ್ತೆಯಾಗಿತ್ತು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಡೀ ಕುಟುಂಬ ವೈರಸ್ ಸೋಂಕಿಗೆ ತುತ್ತಾಗಿತ್ತು. ಇನ್ನೂ ಆತಂಕದ ಸಂಗತಿ ಎಂದರೆ ಈ ವಿವಾಹ ಕಾರ್ಯಕ್ರಮಕ್ಕೆ ರಾಜಸ್ಥಾನದ ನಿವಾಸಿಗಳು ಮಾತ್ರವಲ್ಲದೇ ಗುಜರಾತ್ ನಿಂದಲೂ ಬಂಧುಗಳು ಆಗಮಿಸಿದ್ದರು. ಈ ಬೆಳವಣಿಗೆ ಬಳಿಕ ರಾಜಸ್ಥಾನದಲ್ಲಿ ಮತ್ತೆ 2 ಗ್ರಾಮೀಣ ಪ್ರದೇಶಗಳಿಗೆ ಸೋಂಕು ಪಸರಿಸಿತ್ತು. ಜಲೋರ್ ಮತ್ತು ಸಿರೋಹಿ ಗ್ರಾಮೀಣ ಪ್ರದೇಶದ ನಿವಾಸಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಇನ್ನು ಕಳೆದ ಒಂದು ವಾರದಿಂದ ಬಿಹಾರದಲ್ಲಿ ಕಾಣಿಸಿಕೊಂಡ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಶೇ.65 ಪ್ರಕರಣಗಳು ಗ್ರಾಮೀಣ ಭಾಗ ಮತ್ತು ಅರೆ ನಗರ ಪ್ರದೇಶಗಳಲ್ಲಿ ದಾಖಲಾಗಿದೆ. ಮೇ ಮೊದಲ ವಾರದಿಂದ ಈ ವರೆಗೂ ದಾಖಲಾದ ಒಟ್ಟು 766 ಪ್ರಕರಣಗಳ ಪೈಕಿ 410 ಪ್ರಕರಣಗಳು ಗ್ರಾಮೀಣ ಭಾಗದ್ದಾಗಿದೆ. ಸೀತಾಮರ್ಹಿ, ಬೆಗುಸರೈ, ನವಾಡಾ, ಸಿವಾನ್, ಗೋಪಾಲ್ಗಂಜ್, ಮುಂಗರ್, ಭಗಲಾಪುರ, ಔರಂಗಾಬಾದ್, ಜೆಹಾನಾಬಾದ್, ಮುಜಾಫರ್ಪುರ್, ದರ್ಭಂಗಾ, ಮಧುಬಾನಿ, ಸಹರ್ಸಾ, ಸುಪಾಲ್, ಶೇಖ್‌ಪುರ, ಸಮಸ್ತಿಪುರ, ಕತಿಹಾರ್, ಮಾಧೆಪುರದಂತಹ ಗ್ರಾಮೀಣ ಜಿಲ್ಲೆಗಳಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಇನ್ನು ಪಶ್ಚಿಮ ಬಂಗಾಳದಲ್ಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಇಲ್ಲೂ ಕೂಡ ಹಸಿರುವಲಯದಲ್ಲಿದ್ದ ಸಾಕಷ್ಟು ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಸೋಂಕು ಒಕ್ಕರಿಸಿದೆ. ಪ್ರಮುಖವಾಗಿ ಇತರೆ ರಾಜ್ಯಗಳಿಗೆ ಕೆಲಸ ಅರಸಿ ಹೋಗಿದ್ದ ವಲಸೆ ಕಾರ್ಮಿಕರಿಂದ ಬಂಗಾಳಕ್ಕೆ ಕುತ್ತು ಬಂದಿದೆ. ಕಳೆದ 72 ಗಂಟೆಗಳಲ್ಲಿ 23 ವಲಸೆ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರ ನಡುವೆಯೇ ಬಂಗಾಳಕ್ಕೆ ಸುಮಾರು 2.1 ಲಕ್ಷ ವಲಸೆ ಕಾರ್ಮಿಕರು ಆಗಮಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದಕ್ಕಾಗಿ 8 ರೈಲುಗಳನ್ನು ಸಿದ್ಧಪಡಿಸಲಾಗಿದೆ. ಮುಂದಿನ 5 ದಿನಗಳಲ್ಲಿ 4 ರಾಜ್ಯಗಳಿಂದ ಈ ವಲಸೆ ಕಾರ್ಮಿಕರು ಬಂಗಾಳಕ್ಕೆ ಆಗಮಿಸಲಿದ್ದಾರೆ ಎಂದು ಬಂಗಾಳ ಸರ್ಕಾರ ಮಾಹಿತಿ ನೀಡಿದೆ. ಜಲೋರ್ ಮತ್ತು ಸಿರೋಹಿಯಲ್ಲಿ 35 ಪ್ರಕರಣಗಳು ದಾಖಲಾಗಿದ್ದು, ಜಲೋರ್ ನಲ್ಲಿ 14 ಮತ್ತು ಸಿರೋಹಿಯಲ್ಲಿ 11 ಮಂದಿಗೆ ಸೋಂಕು ಪ್ರಸರಿಸಿದೆ. ಇದಲ್ಲದೆ ಭಿಲ್ವಾರಾ, ಚಿತ್ತೋರ್‌ಗಢ, ರಾಜಸ್ಮಂಡ್ ಮತ್ತು ಬಾರ್ಮರ್ ಗೆ ಅಗಮಿಸಿದ್ದ ವಲಸೆ ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿದೆ.
ರಾಜಸ್ಥಾನದಲ್ಲೂ ಕೂಡ ಇದೇ ವಲಸೆ ಕಾರ್ಮಿಕರಿಂದ ಕುತ್ತು ಬಂದಿದ್ದು, 2 ವಾರಗಳ ಅಂತರದಲ್ಲಿ ರಾಜಸ್ಥಾನದ 2 ಗ್ರಾಮೀಣ ಜಿಲ್ಲೆಗಳಿಗೆ ಸೋಂಕು ಹಬ್ಬಿದೆ. ಇದೇ ವಿಚಾರವಾಗಿ ಮಾತನಾಡಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗ್ರಾಮೀಣ ಭಾಗಕ್ಕೆ ಸೋಂಕು ಪ್ರಸರಣ ತಪ್ಪಿಸಲು ವಲಸೆ ಕಾರ್ಮಿಕರಿಂದ ತೊಡಕಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಮಿಕರು ಆಗಮಿಸುತ್ತಿದ್ದಾರೆ. ನಿಜಕ್ಕೂ ಸರ್ಕಾರಕ್ಕೆ ಇದು ದೊಡ್ಡ ಸವಾಲು ಎಂದು ಹೇಳಿದ್ದರು.
ಜಾರ್ಖಂಡ್ ನಲ್ಲಿ ಮೇ ಮೊದಲ ವಾರದ ಬಳಿಕ ದಾಖಲಾದ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಶೇ.75ರಷ್ಟು ಪ್ರಕರಣಗಳು ಗ್ರಾಮೀಣ ಭಾಗದ್ದಾಗಿದೆ. ಕಳೆದ 12 ದಿನಗಳಲ್ಲಿ ಜಾರ್ಖಂಡ್ ನಲ್ಲಿ 50 ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 38 ಪ್ರಕರಣಗಳು ಗ್ರಾಮೀಣ ಭಾಗದಗದ್ದಾಗಿದೆ. ಈ ಎಲ್ಲ ಅಂಕಿ ಅಂಶಗಳೂ ಭಾರತದಲ್ಲಿ ಕೊರೋನಾ ಸೋಂಕು ಗ್ರಾಮೀಣ ಭಾಗಕ್ಕೂ ಒಕ್ಕರಿಸಿದೆ ಎಂಬುದನ್ನು ಸಾಬೀತು ಪಡಿಸುತ್ತಿದೆ. ಒಂದು ವೇಳೆ ಗ್ರಾಮೀಣ ಭಾಗಗಳಿಗೆ ವೈರಸ್ ಪ್ರಸರಣವಾಗಿದ್ದೇ ಆದರೆ ಭಾರತ ತನ್ನ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ಅತ್ಯಂತ ದೊಡ್ಡ ದುರಂತಕ್ಕೆ ಸಾಕ್ಷಿಯಾಗಲಿದೆ. ಹೀಗಾಗಿ ಕೂಡಲೇ ಕೊರೋನಾ ಸೋಂಕು ಪ್ರಸರಣ ತಡೆಯುವುದು ಅತ್ಯಂತ ಮುಖ್ಯವಾಗಿದೆ.
Comments are closed.