ರಾಷ್ಟ್ರೀಯ

ಲಾಕ್ ​ಡೌನ್ 4.0​​ರ ಮಾರ್ಗಸೂಚಿ ಮೇ 15 ರಂದೇ ಹೊರ ಬೀಳುವ ಸಾಧ್ಯತೆ

Pinterest LinkedIn Tumblr


ನವದೆಹಲಿ: ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣ ಮಾಡಲೆಂದು ಹೇರಲಾಗಿದ್ದ ಮೂರನೇ ಹಂತದ ಲಾಕ್​ಡೌನ್​​ ಮೇ 17ಕ್ಕೆ ಮುಕ್ತಾಯವಾಗಲಿದೆ. ಮೇ 18ರಿಂದ ನಾಲ್ಕನೇ ಹಂತದ ಲಾಕ್​​ಡೌನ್​​ ಜಾರಿಗೊಳ್ಳಲಿದೆ. ನಾಲ್ಕನೇ ಹಂತದ ಲಾಕ್​ಡೌನ್​​​ ನಿಯಮಗಳು ಹೇಗಿರಲಿವೆ ಎಂದು ತಿಳಿಸುವ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಮೇ 15ರಂದೇ ಹೊರಬೀಳುವ ಸಾಧ್ಯತೆ ‌ಇದೆ.

ಮೇ 18ರ ಬಳಿಕ ಜಾರಿಗೊಳ್ಳಲಿರುವ ನಾಲ್ಕನೇ ಹಂತದ ಲಾಕ್ಡೌನ್ ನಿಯಮಗಳು ಹೇಗಿರಬೇಕೆಂದು ಈಗಾಗಲೇ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿಯನ್ನು ಸಿದ್ದಪಡಿಸಿದೆ. ಆದರೆ ಕಡೆಗಳಿಗೆಯಲ್ಲಿ ರಾಜ್ಯಗಳಿಂದ ಕೆಲವು ಸಲಹೆ ಬರುವ ಸಾಧ್ಯತೆ ಇದ್ದು, ರಾಜ್ಯಗಳ ಸಲಹೆಗಳನ್ನೂ ಆಧರಿಸಿ ಮಾರ್ಪಾಡು ಮಾಡಿ ಮಾರ್ಗಸೂಚಿ ಹೊರಡಿಸಲು ಕಾಯುತ್ತಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಹಾಗೂ ಲಾಕ್​ಡೌನ್​​ ಸಂದರ್ಭ ನಿಭಾಯಿಸುವ ದೃಷ್ಟಿಯಿಂದ ರಾಜ್ಯಗಳು ಈಗಾಗಲೇ ಮೌಖಿಕ ಸಲಹೆಗಳನ್ನು ನೀಡಿದ್ದೀರಿ‌. ಇನ್ನೂ ಏನಾದರೂ ಸಲಹೆ, ಶಿಫಾರಸುಗಳಿದ್ದರೆ ಮೇ‌ 15ರೊಳಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ. ಎಲ್ಲಾ ಸಲಹೆಗಳನ್ನು ಆಧರಿಸಿ‌ ಹೊಸ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುವುದು ಎಂದು ಹೇಳಿದ್ದರು. ಅದರ ಅನ್ವಯ ಕೇಂದ್ರ ಗೃಹ ಇಲಾಖೆ ಈಗ ಮೇ 15ರವರೆಗೆ ರಾಜ್ಯಗಳಿಂದ ಸಲಹೆಗಳು ಬರಬಹುದು ಎಂದು ಕಾಯುತ್ತಿದೆ.

ಕೇಂದ್ರ ಗೃಹ ಇಲಾಖೆ ಅಧಿಕಾರಿಗಳ ಪ್ರಕಾರ ನಾಲ್ಕನೇ ಹಂತದ ಲಾಕ್​ಡೌನ್​​ ಈವರೆಗಿನ ಮೂರು ಲಾಕ್​ಡೌನ್​​ ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಬಹಳಷ್ಟು ವಿನಾಯಿತಿಗಳನ್ನು ಒಳಗೊಂಡಿರುತ್ತದೆ‌‌. ಬಹುತೇಕ ಎಲ್ಲಾ ವಲಯಗಳಿಗೂ (ಹಸಿರು, ಕಿತ್ತಳೆ ಮತ್ತು ಕೆಂಪು) ವಿನಾಯಿತಿಗಳು ದೊರೆಯಲಿವೆ. ಉತ್ಪಾದನಾ ಕ್ಷೇತ್ರಕ್ಕೆ ಸಂಪೂರ್ಣವಾದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಹೊಸ ಮಾರ್ಗಸೂಚಿಯಲ್ಲಿ ಅಗತ್ಯ ಬಿದ್ದರೆ ನೀವೇ ಕಠಿಣ ನಿಯಮ ರೂಪಿಸಿಕೊಳ್ಳಿ ಎಂದು ರಾಜ್ಯ‌ ಸರ್ಕಾರಗಳ ವಿವೇಚನೆಗೆ ಬಿಡುವ ಸಾಧ್ಯತೆಯೂ ಇರಲಿದೆ‌. ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳನ್ನು ಗುರುತಿಸುವ ವಿಷಯವನ್ನೂ ರಾಜ್ಯ‌ ಸರ್ಕಾರಗಳ ವಿವೇಚನೆಗೆ ಬಿಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಆದರೆ ಮಾಸ್ಕ್ ಧರಿಸುವುದು, ಆರು ಮೀಟರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸೇಷನ್ ಮಾಡಿಕೊಳ್ಳುವುದು ಕಡ್ಡಾಯವಾಗಿರಲಿದೆ.

Comments are closed.