ರಾಷ್ಟ್ರೀಯ

ವಿಶಾಖಪಟ್ಟಣ ಅನಿಲ ದುರಂತ; ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಜಗನ್!

Pinterest LinkedIn Tumblr

ವಿಶಾಖಪಟ್ಟಣಂ: ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.

ಇಂದು ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಗೆ ಮತ್ತು ಇತರೆ ಕಾರ್ಯಗಳಿಗೆ ಬಂದವರು ವಿಷಾನಿಲವನ್ನು ಉಸಿರಾಡಿ ಕೂಡಲೇ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಇಬ್ಬರು ವೃದ್ಧರು, 7 ವರ್ಷದ ಬಾಲಕಿ ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಐದು ಮಂದಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ಮಾತನಾಡಿರುವ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಮೃತರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರ ಘೋಷಿಸಲಾಗಿದೆ. ಇದರ ಜೊತೆಗೆ ಅಸ್ವಸ್ಥರ ಚಿಕಿತ್ಸೆಯನ್ನು ರಾಜ್ಯ ಸರ್ಕಾರವೇ ಬರಿಸಲಿದೆ. ಇನ್ನು ತೀವ್ರ ಅಸ್ವಸ್ಥರಿಗೆ 10 ಲಕ್ಷ ಪರಿಹಾರ. ಆಸ್ಪತ್ರೆಯಲ್ಲಿ 2-3 ದಿನ ಉಳಿದವರಿಗೆ 5 ಲಕ್ಷ, ಗಾಯಾಳುಗಳಿಗೆ 1 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದರು.

ಅಸ್ವಸ್ಥರನ್ನು ವಿಶಾಖಪಟ್ಟದ ಕಿಂಗ್ ಜಾರ್ಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೊಂದು ಆಸ್ಪತ್ರೆಯಲ್ಲೇ ಸುಮಾರು 200ಕ್ಕೂ ಅಧಿಕ ಮಂದಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಷಾನಿಲ ಸೋರಿಕೆಯಿಂದಾಗಿ ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಗೋಪಾಲಪಟ್ಟಣಂ ಸುತ್ತಲಿನ ಐದು ಗ್ರಾಮಗಳಲ್ಲಿನ ಜನರಿಗೆ ಉಸಿರಾಟದ ತೊಂದರೆ ಮತ್ತು ಗಂಟಲು ಕೆರೆತ ಸಮಸ್ಯೆ ಆರಂಭವಾಗಿದೆ. ನೂರಾರು ಮಂದಿ ಉಸಿರಾಟದ ಸಮಸ್ಯೆ, ಗಂಟಲು ನೋವು, ಕಣ್ಣಿನ ಉರಿ, ಹೊಟ್ಟೆ ನೋವು, ಇತರೆ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಲು ಇದೀಗ ಆ್ಯಂಬುಲೆನ್ಸ್ ಗಳನ್ನು ಮತ್ತು ಸರ್ಕಾರಿ ಸಾರಿಗೆ ಬಸ್ ಗಳನ್ನು ಕೂಡ ನಿಯೋಜನೆ ಮಾಡಲಾಗಿದೆ.

ಇನ್ನು 1000ಕ್ಕೂ ಹೆಚ್ಚು ಮಂದಿ ವಿಷಾನಿಲವನ್ನು ಸೇವಿಸಿದ್ದು ಮುಂದೆ ದೊಡ್ಡ ಅನಾಹುತ ಸಂಭವಿಸಬಹುದಾಗಿದೆ.

Comments are closed.