ರಾಷ್ಟ್ರೀಯ

ಜಮ್ಮು ಕಾಶ್ಮೀರ ಗಡಿಯಲ್ಲಿ ಐವರು ಯೋಧರು ಹುತಾತ್ಮ

Pinterest LinkedIn Tumblr


ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ದಾಳಿಯಲ್ಲಿ ಇಬ್ಬರು ಹಿರಿಯ ಸೇನಾ ಅಧಿಕಾರಿಗಳು ಸೇರಿ 5 ಜನ ಸೈನಿಕರು ಹುತಾತ್ಮರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಶನಿವಾರ ಉಗ್ರರಿಗಾಗಿ ಕಾರ್ಯಚರಣೆ ನಡೆಸುತ್ತಿದ್ದ ಸೇನೆ ಮೇಲೆ ದಾಳಿ ನಡೆದಿದ್ದು, ಕೊಲೊನೆಲ್‌, ಮೇಜರ್‌ ಹಾಗೂ ಪೊಲೀಸ್‌ ಅಧಿಕಾರಿ ಮತ್ತು ಇಬ್ಬರು ಸೈನಿಕರು ಮಡಿದಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಪೊಲೀಸ್‌ ಇಲಾಖೆ ಹಾಗೂ ಸಶಸ್ತ್ರ ಪಡೆಗಳು ಜಂಟಿಯಾಗಿ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಶ್ರೀನಗರದಿಂದ 70 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಹುತಾತ್ಮರಾದ 5 ಜನರ ತಂಡ ಹಲವಾರು ಜನರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ. ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಂದ್ವಾರಾ ಚಾಂಗಿಮುಲ್ಲಾ ಪ್ರದೇಶದಲ್ಲಿ ನಾಗರಿಕರನ್ನು ಉಗ್ರರು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು ಎಂಬ ಮಾಹಿತಿ ಹಿನ್ನೆಲೆ ಸೇನೆ ಜಂಟಿ ಕಾರ್ಯಾಚರಣೆ ನಡೆಸಿತ್ತು. ಐವರು ಸೇನೆಯ ಸಿಬ್ಬಂದಿ ಹಾಗೂ ಒಬ್ಬರು ಪೊಲೀಸ್‌ ಅಧಿಕಾರಿಯಿದ್ದ ತಂಡದಿಂದ ನಾಗರಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಆದರೆ, ಈ ವೇಳೆಯಲ್ಲಿ ಉಗ್ರರು ಭಾರಿ ಪ್ರಮಾಣದ ಗುಂಡಿನ ದಾಳಿ ನಡೆಸಿದ್ದರಿಂದ ಐವರು ಭದ್ರತಾ ಪಡೆಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಹುತಾತ್ಮರಾದ ಸೇನಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವಿಟ್ಟರ್‌ನಲ್ಲಿ ಗೌರವ ಸಲ್ಲಿಸಿದ್ದಾರೆ. ಹಂದ್ವಾರದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಸೈನಿಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಉಗ್ರರ ವಿರುದ್ಧ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಈ ಧೈರ್ಯ ಹಾಗೂ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್‌ ಇಮ್ತಿಯಾಜ್‌ ಹುಸೇನ್‌ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಹುತಾತ್ಮರ ವಿವರಗಳನ್ನು ಹಂಚಿಕೊಂಡಿದ್ದಾರೆ. ದಾಳಿಯಲ್ಲಿ ಕೊಲೋನೆಲ್‌ ಅಶುತೋಷ್‌ ಶರ್ಮಾ, ಮೇಜರ್‌ ಅನೂಜ್‌ ಸೂದ್‌, ನಾಯ್ಕ್‌ ರಾಜೇಶ್‌, ಲ್ಯಾನ್ಸ್‌ ನಾಯ್ಕ್‌ ದಿನೇಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಶಕೀಲ್‌ ಕ್ವಾಜಿ ಹುತಾತ್ಮರಾಗಿದ್ದಾರೆ.

Comments are closed.