
ಕಲ್ಯಾಣ್ (ಮಹಾರಾಷ್ಟ್ರ): ಕೋಮು ಸಾಮರಸ್ಯ ಅಂದರೇನು ಅನ್ನೋದಕ್ಕೆ ಇಲ್ಲೊಂದು ಅತ್ಯುತ್ತಮ ಉದಾಹರಣೆ ಇದೆ. ನೋಡಿ. ಕೊರೊನಾ ವೈರಸ್ ಲಾಕ್ಡೌನ್ ಇರುವ ಹೊತ್ತಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟ 68 ವರ್ಷದ ವೃದ್ಧೆಯೊಬ್ಬರ ಅಂತ್ಯಸಂಸ್ಕಾರ ಮಾಡೋದು ಹೇಗೆ ಎಂದು ಅವರ ಮಗ ಪರಿತಪಿಸುತ್ತಿದ್ದರು. ಈ ವೇಳೆ, ಆತನ ನೆರವಿಗೆ ನಿಂತಿದ್ದು ಮುಸ್ಲಿ ಯುವಕರು.. ಈ ಮೂಲಕ, ಮಹಾಮಾರಿ ಆರ್ಭಟಿಸುತ್ತಿರುವ ಹೊತ್ತಲ್ಲೂ ಕೋಮು ಸಾಮರಸ್ಯ ಕದಡುವಂಥಾ ಮಾತುಗಳನ್ನಾಡುವ ಜನರಿಗೆ ಬಿಸಿ ಮುಟ್ಟಿಸಿದ್ದಾರೆ.
ಪ್ರಭಾ ಕಲ್ವಾರ್ ಎಂಬ ವೃದ್ಧೆ, ಶನಿವಾರ ಅಸ್ವಸ್ಥರಾಗಿದ್ದರು. ಅವರ ಮಗ ಮಹೇಶ್, ತಮ್ಮ ನೆರೆ ಮನೆಯಲ್ಲಿದ್ದ ಶಾಕೀರ್ ಶೇಖ್ ಅವರನ್ನು ಸಂಪರ್ಕಿಸಿದರು. ಕೂಡಲೇ ಇಬ್ಬರೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ದುರಾದೃಷ್ಟವಶಾತ್, ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಆಕೆಯ ಅಂತ್ಯಸಂಸ್ಕಾರ ನಡೆಸೋದೂ ಮಹೇಶ್ ಅವರಿಗೆ ಕಷ್ಟವಾಗಿತ್ತು. ಏಕೆಂದರೆ, ಅವರ ಹಿರಿಯಣ್ಣ ಪಾಶ್ವವಾಯು ಪೀಡಿತರಾದ್ರೆ, ಇನ್ನಿಬ್ಬರು ಸಹೋದರರು ವಿದೇಶದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಮಹೇಶ್ ಅವರಿಗೆ ಕುಟುಂಬ ಸದಸ್ಯರ ರೀತಿ ನೆರವಿಗೆ ಬಂದವರು ಶಾಕೀರ್ ಶೇಖ್. ಈ ಹಿಂದೆ ಅವರ ನೆರೆಮನೆಯಲ್ಲಿದ್ದ ಶೇಖ್, ಇದೀಗ ಮಹೇಶ್ ಅವರ ತಾಯಿಯ ಅಂತ್ಯಸಂಸ್ಕಾರಕ್ಕೆ ಸಿದ್ದವಾಗಿ ನಿಂತರು. ತಮ್ಮ ಸಂಬಂಧಿಕರನ್ನೆಲ್ಲಾ ಒಂದೆಡೆ ಕಲೆಹಾಕಿದ ಶೇಖ್, ಹತ್ತಾರು ಯುವಕರ ಜೊತೆಗೆ ನಿಂತು ಮಹೇಶ್ ಅವರ ತಾಯಿಯ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ಕೊರೊನಾ ವೈರಸ್ ಆರ್ಭಟಿಸುತ್ತಿರುವ ಇಂಥಾ ದಿನಗಳನ್ನೂ ಸಮುದಾಯಗಳ ನಡುವೆ, ಧರ್ಮ-ಧರ್ಮಗಳ ನಡುವೆ ದ್ವೇಷ ಮನೋಭಾವವನ್ನು ಬಿತ್ತುವ ಜನರ ನಡುವೆ, ಮಹೇಶ್ ಹಾಗೂ ಶಾಕೀರ್ ಶೇಖ್ ಮಾದರಿಯಾಗಿದ್ದಾರೆ. ಶಾಕೀರ್ ಶೇಖ್ ಅವರ ಕರೆಗೆ ಓಗೊಟ್ಟು ಅಂತ್ಯ ಸಂಸ್ಕಾರ ನೆರವೇರಿಸಲು ಮುಂದಾದ ಯುವಕರು ಸಮಾಜಕ್ಕೇ ಮಾದರಿಯಾಗಿದ್ಧಾರೆ.
Comments are closed.