
ನವದೆಹಲಿ: ಕೇಂದ್ರ ಸರ್ಕಾರದ ನೌಕರರು ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸರ್ಚ್ ರೂಪಿಸಿರುವ ‘ಆರೋಗ್ಯ ಸೇತು’ ಆ್ಯಪ್ ಅನ್ನು ತಮ್ಮ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಇಂದು ಕೇಂದ್ರ ಸರ್ಕಾರ ಆದೇಶಿಸಿದೆ.
ತನ್ನ ಎಲ್ಲಾ ನೌಕರರು ಆರೋಗ್ಯ ಸೇತು ಆ್ಯಪ್ ಅನ್ನು ತಮ್ಮ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದಿರುವ ಕೇಂದ್ರ ಸರ್ಕಾರ ‘ಕೂಡಲೇ ಡೌನ್ ಲೋಡ್ ಮಾಡಿಕೊಳ್ಳುವಂತೆಯೂ’ ತಾಖೀತು ಮಾಡಿದೆ. ಅಲ್ಲದೆ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡವರಿಗಷ್ಟೇ ಕಚೇರಿಗಳಿಗೆ ಪ್ರವೇಶಾವಕಾಶ ಎಂದು ಕೂಡ ಹೇಳಲಾಗಿದೆ.
ನಿನ್ನೆಯಷ್ಟೇ ನೀತಿ ಆಯೋಗದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ನೌಕರನಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀತಿ ಆಯೋಗಕ್ಕೆ ಕಚೇರಿ ಸೀಲ್ ಡೌನ್ ಮಾಡುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಹರ್ಷವರ್ಧನ್ ಅವರ ಓಎಸ್ ಡಿ ಕಚೇರಿಯ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟ ಬಳಿಕ ಅವರ ಕಚೇರಿಯನ್ನೂ ಸೀಲ್ ಡೌನ್ ಮಾಡಲು ಸೂಚಿಸಲಾಗಿದೆ.
ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡರೆ ಇಡೀ ಕಚೇರಿಯ ಕೆಲಸವೇ ಸ್ಥಗಿತಗೊಳ್ಳುವ ಅಪಾಯವಿದೆ. ಈಗಾಗಲೇ ಒಂದು ತಿಂಗಳಿನಿಂದ ಕೆಲಸ ಸ್ಥಗಿತವಾಗಿದೆ. ಆದುದರಿಂದ ಕೇಂದ್ರ ಗೃಹ ಇಲಾಖೆ ಕೂಡ ಯಾರಿಗೋ ಒಬ್ಬರಿಗೆ ಕೊರೋನಾ ಕಾಣಿಸಿಕೊಂಡರೆ ಇಡೀ ಕಚೇರಿಗೆ ಬೀಗ ಜಡಿದು ಕೆಲಸಕ್ಕೆ ಅಡ್ಡಿಪಡಿಸಬೇಡಿ. ಆ ಕಚೇರಿಯಲ್ಲಿ ಕೊರೋನಾ ಸೋಂಕು ಪೀಡಿತರು ಇದ್ದಾರೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೂಲ್ ಟೆಸ್ಟ್ ಮಾಡಿ ಎಂದು ನಿರ್ದೇಶನ ನೀಡಿದೆ.
ಇದಲ್ಲದೆ ಮಾರಕ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸಲು ಈಗಾಗಲೇ ಎರಡು ಹಂತಗಳಲ್ಲಿ 40 ದಿನಗಳ ಲಾಕ್ಡೌನ್ ಘೋಷಣೆ ಮಾಡಿಯಾಗಿದೆ. ಮೇ 3ನೇ ತಾರೀಖಿಗೆ ಲಾಕ್ಡೌನ್ ಅವಧಿ ಮುಗಿಯಲಿದೆ. ಇನ್ನೊಂದು ಹಂತದಲ್ಲಿ ಲಾಕ್ಡೌನ್ ವಿಸ್ತರಣೆ ಆಗಬಹುದು, ಆಗದೇ ಇರಬಹುದು. ಆದರೆ ಲಾಕ್ಡೌನ್ ವಿಸ್ತರಣೆ ಮಾಡಿದರೂ ಜೊತೆಯಲ್ಲಿ ಕೆಲಸ ಆಗುವಂತೆ ನೋಡಿಕೊಳ್ಳಬೇಕು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿದೆ. ನೌಕರರು ಪ್ರತಿದಿನ ಕಚೇರಿ ಪ್ರವೇಶ ಮಾಡುವಾಗ ಆ್ಯಪ್ ಓಪನ್ ಮಾಡಿ ತೋರಿಸಬೇಕು. ಆ್ಯಪ್ ನಲ್ಲಿ ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸರ್ಚ್ ರೂಪಿಸಿರುವ ನಿಯಮಗಳನ್ನು ಪಾಲಿಸಿರಬೇಕು. ಅವರ ಸ್ಟೇಟಸ್ ‘ಸೇಫ್’ ಅಥವಾ ‘ಲೋ ರಿಸ್ಕ್’ ಅಂತಾ ಇದ್ದರೆ ಮಾತ್ರ ಪ್ರವೇಶ ಇಲ್ಲದಿದ್ದರೆ ಅವರನ್ನು 14 ದಿನಗಳ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ.ಸದ್ಯ ಕೇಂದ್ರ ಸರ್ಕಾರದ ನೌಕರರಿಗೆ ಅನ್ವಯ ಆಗುವ ಈ ನಿಯಮ ಮುಂದೆ ರಾಜ್ಯ ಸರ್ಕಾರ ಮತ್ತು ಖಾಸಗಿ ವಲಯದ ನೌಕಕರಿಗೂ ಅನ್ವಯವಾಗಬಹುದು.
Comments are closed.