ಅಂತರಾಷ್ಟ್ರೀಯ

ಕೊರೊನಾ ಚಿಕಿತ್ಸೆಗೆ ಈಜಿಕೊಂಡು ಭಾರತಕ್ಕೆ ಬಂದ ಬಾಂಗ್ಲಾದೇಶದ ಪ್ರಜೆ!

Pinterest LinkedIn Tumblr


ಅಸ್ಸಾಂ: ಬಾಂಗ್ಲಾದೇಶದ ಪ್ರಜೆಯೊಬ್ಬ ಕೊರೊನಾ ವೈರಸ್ ಚಿಕಿತ್ಸೆಗಾಗಿ ಈಜಿಕೊಂಡು ಬಂದು ಭಾನುವಾರ ಅಸ್ಸಾಂ ತಲುಪಿದ್ದಾನೆ ಎಂದು ಭಾರತದ ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ.

ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಕುಷೈರರಾ ನದಿ ಮೂಲಕ ಈಜಿಕೊಂಡು ಬಂದ ಸೋಂಕಿತ ವ್ಯಕ್ತಿ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಗೆ ಬಂದು ತಲುಪಿದ್ದು, ಈ ಹಿನ್ನೆಲೆಯಲ್ಲಿ ಇಂಡೋ-ಬಾಂಗ್ಲಾ ಗಡಿಯ ಸಮೀಪ ಹಲವಾರು ಗ್ರಾಮಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು ಎಂದು ಬಿಎಸ್‌ಎಎಫ್ ತಿಳಿಸಿದೆ. 30 ವರ್ಷದ ಆಸುಪಾಸಿನಲ್ಲಿರುವ ಬಾಂಗ್ಲಾದೇಶಿ ಪ್ರಜೆಯನ್ನು ಅಲ್ಲಿನ ಸುನಮ್‌ಗಂಜ್ ಜಿಲ್ಲೆಯ ಝೋರಾಬಜಾರ್ ನಿವಾಸಿ ಅಬ್ದುಲ್ ಹಕ್ ಎಂದು ಗುರುತಿಸಲಾಗಿದೆ. ಆತನನ್ನು ವಶಕ್ಕೆ ಪಡೆದ ಬಿಎಸ್ಎಫ್ ಅಧಿಕಾರಿಗಳು ಮರಳಿ ಬಾಂಗ್ಲಾದೇಶಕ್ಕೆ ಒಪ್ಪಿಸಿದ್ದಾರೆ.

ಉಭಯ ದೇಶಗಳ ಗಡಿ ಪ್ರದೇಶವಾಗಿರುವ ಕುಶಿಯಾರಾ ನದಿಯಲ್ಲಿ ಈಜಿಕೊಂಡು ಬಂದಿರುವ ವ್ಯಕ್ತಿ ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಕರೀಮ್‌ಗಂಜ್ ನ ಮುಬಾರಕ್‌ಪುರ್ ತಲುಪಿದ್ದನು. ವಿಚಾರ ತಿಳಿದು ಸ್ಥಳೀಯ ನಿವಾಸಿಗಳು ಬಿಎಸ್‌ಎಫ್ ಸಿಬ್ಬಂದಿಗಳಿಗೆ ಮಾಹಿತಿ ಮುಟ್ಟಿಸಿದರು. ಹೀಗಾಗಿ ಯೋಧರು ಆತನನ್ನು ತಡೆದು ವಿಚಾರಣೆ ನಡೆಸಿದರು. ಆತನ ಆರೋಗ್ಯ ಹದಗೆಟ್ಟಿತ್ತು. ಈಜಿ ಬಂದುದರಿಂದ ನಿತ್ರಾಣವಾಗಿತ್ತು. ತನಗೆ ಕೊರೊನಾ ವೈರಸ್ ತಗುಲಿದ್ದು ಚಿಕಿತ್ಸೆಗಾಗಿ ನದಿ ದಾಟಿ ಬಂದೆ ಎಂದು ಬಾಂಗ್ಲಾದೇಶಿ ಕ್ಷೀಣದನಿಯಲ್ಲಿ ಹೇಳಿದ್ದಾನೆ. ಬಳಿಕ ವಿಚಾರವನ್ನು ಬಾಂಗ್ಲಾದೇಶದ ಗಡಿ ರಕ್ಷಣಾಪಡೆಗೆ (ಬಿಜಿಬಿ) ವಿಷಯ ತಿಳಿಸಿ. ಬಾಂಗ್ಲಾ ರಕ್ಷಣಾಪಡೆಯ ಎರಡು ದೋಣಿ ಬಂದು ಬೆಳಗ್ಗೆ 9 ಗಂಟೆ ಹೊತ್ತಿಗೆ ಮರಳಿ ಆತನನ್ನು ತನ್ನ ದೇಶಕ್ಕೆ ಕರೆದುಕೊಂಡು ಹೋಗಿದೆ ಎಂದು ಉನ್ನತ ಮೂಲದ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಅಸ್ಸಾಂನಲ್ಲಿರುವ ಸಿಲ್ಚಾರ್ ಮತ್ತು ಕರೀಮ್‌ಗಂಜ್ ಬಾಂಗ್ಲಾದೊಂದಿಗೆ 135 ಕಿಮೀ ಗಡಿ ಪ್ರದೇಶವನ್ನು ಹಂಚಿಕೊಂಡಿದೆ. ಇದರಲ್ಲಿ 4 ಕಿಮೀ ನದಿ ಇದೆ. ಉಭಯ ದೇಶಗಳ ಜನರಿಂದ ಇಲ್ಲಿ ತಕರಾರು ಇರುವುದರಿಂದ ಇಲ್ಲಿ ಇನ್ನೂ ಕೂಡ ನದಿಗೆ ಬೇಲಿ ಹಾಕಿಲ್ಲ. ಬಾಂಗ್ಲಾದೇಶದೊಂದಿಗೆ ಅಸ್ಸಾಂ ಒಟ್ಟು 262ಕಿಮೀ ಗಡಿಯನ್ನು ಹಂಚಿಕೊಂಡಿದೆ. ನಿಗದಿತ ಬೇಲಿ ಇಲ್ಲದಿರುವುದುರಿಂದ ಗಡಿ ಪ್ರದೇಶದ ಮೂಲಕ ಕಳ್ಳಸಾಗಾಣಿಕೆ ಮತ್ತು ಒಳನುಸುಳುವಿಕೆ ನಿರಂತರವಾಗಿ ನಡೆಯುತ್ತಿದೆ.

Comments are closed.