ರಾಷ್ಟ್ರೀಯ

ಜುಲೈ ಬದಲು ಸೆಪ್ಟೆಂಬರ್ ನಲ್ಲಿ ಶೈಕ್ಷಣಿಕ ವರ್ಷ ಆರಂಭಿಸಿ: ಯುಜಿಸಿ ಸಮಿತಿ ಶಿಫಾರಸು

Pinterest LinkedIn Tumblr


ನವದೆಹಲಿ:ದೇಶದಲ್ಲಿ ಕೋವಿಡ್-19 ಸ್ಥಿತಿಗತಿಯಿಂದಾಗಿ ಜುಲೈ ಬದಲು ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭ ಮಾಡಬಹುದು ಎಂದು ಯುಜಿಸಿ ನೇಮಿಸಿರುವ ಸಮಿತಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿವೆ.

ಕೊರೋನಾ ಸೋಂಕಿನಿಂದ ಲಾಕ್ ಡೌನ್ ಘೋಷಣೆಯಾದ ನಂತರ ಆಗಿರುವ ಶೈಕ್ಷಣಿಕ ಪಾಠ-ಪರೀಕ್ಷೆಗಳ ನಷ್ಟ ಮತ್ತು ಆನ್ ಲೈನ್ ಶಿಕ್ಷಣದ ಬಗ್ಗೆ ಪರಿಶೀಲನೆ ನಡೆಸಲು ಯುಜಿಸಿ ಎರಡು ಸಮಿತಿಗಳನ್ನು ರಚಿಸಿತ್ತು. ಹರ್ಯಾಣ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್ ಸಿ ಕುಹಾದ್ ನೇತೃತ್ವದ ಒಂದು ಸಮಿತಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕ್ರಮಗಳನ್ನು ಪರಿಶೀಲಿಸಲು ಮತ್ತು ಬದಲಿ ಶೈಕ್ಷಣಿಕ ದಿನಾಂಕಗಳನ್ನು ಸೂಚಿಸುವಂತೆ ಹೇಳಲಾಗಿತ್ತು.

ಆನ್ ಲೈನ್ ಶಿಕ್ಷಣವನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಉಪ ಕುಲಪತಿ ನಾಗೇಶ್ವರ ರಾವ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು.

ಈ ಎರಡೂ ಸಮಿತಿಗಳು ನಿನ್ನೆ ಸರ್ಕಾರಕ್ಕೆ ತಮ್ಮ ವರದಿಗಳನ್ನು ಮಂಡಿಸಿವೆ.

ವರದಿಯಲ್ಲಿ ಏನು ಹೇಳಿವೆ: ಒಂದು ಸಮಿತಿ ಪ್ರತಿವರ್ಷದಂತೆ ಈ ವರ್ಷ ಜುಲೈ ಬದಲು ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಪ್ರಾರಂಭ ಮಾಡುವಂತೆ ಸೂಚಿಸಿದೆ. ವಿಶ್ವವಿದ್ಯಾಲಯಗಳಲ್ಲಿ ಸೌಕರ್ಯಗಳಿದ್ದರೆ ಆನ್ ಲೈನ್ ನಲ್ಲಿ ಪರೀಕ್ಷೆಗಳನ್ನು ನಡೆಸಿ ಇಲ್ಲದಿದ್ದರೆ ಲಾಕ್ ಡೌನ್ ಮುಗಿದ ನಂತರ ಎಂದಿನ ರೀತಿಯಲ್ಲಿ ಪರೀಕ್ಷೆ ನಡೆಸಲಿ ಎಂದು ಹೇಳಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಎರಡೂ ವರದಿಗಳನ್ನು ಅಧ್ಯಯನ ಮಾಡಿ ಅಧಿಕೃತ ಮಾರ್ಗಸೂಚಿಗಳನ್ನು ಮುಂದಿನ ವಾರ ಹೊರಡಿಸುವ ಸಾಧ್ಯತೆಯಿದೆ.

Comments are closed.