ರಾಷ್ಟ್ರೀಯ

ಬೇರೆ ದೇಶಗಳಿಗೆ ಭಾರತವನ್ನು ಹೋಲಿಸಿದಾಗ ಕೊರೋನಾ ಸೋಂಕು ಏರಿಕೆ ತಹಬದಿಯಲ್ಲಿದೆ- ಸರ್ಕಾರ ಸ್ಪಷ್ಟನೆ

Pinterest LinkedIn Tumblr


ನವದೆಹಲಿ(ಏ. 23): ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಏರುತ್ತಲೇ ಇದೆಯಲ್ಲ ಎಂಬ ಆತಂಕ ಸಹಜ. ಆದರೆ, ಭಯಪಡುವಷ್ಟಿಲ್ಲ ಎಂದು ಸರ್ಕಾರ ಹೇಳುತ್ತಿದೆ. ದಿನವೂ ಹೊಸ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದರೂ ಸೋಂಕಿನ ವೇಗದಲ್ಲಿ ಹೆಚ್ಚಳವಾಗಿಲ್ಲ ಎಂದು ಹಿರಿಯ ಅಧಿಕಾರಿ ಸಿ.ಕೆ. ಮಿಶ್ರಾ ತಿಳಿಸಿದ್ದಾರೆ. ಲಾಕ್ ಡೌನ್​ಗೆ ಮುಂಚೆ ಇದ್ದ ಶೇ. 4.4ರ ಸೋಂಕು ದರವೇ ಈಗಲೂ ಇದೆ. ಲಾಕ್ ಡೌನ್ ನಂತರ ಭಾರತದಲ್ಲಿ ಪರೀಕ್ಷಾ ಪ್ರಮಾಣ 33 ಪಟ್ಟು ಹೆಚ್ಚಾದರೂ ಸೋಂಕು ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲದಿರುವುದು ಗಮನಾರ್ಹ ಎಂದವರು ಹೇಳಿದ್ಧಾರೆ.

ಲಾಕ್ ಡೌನ್ ಆಗಿರದಿದ್ದರೆ ಭಾರತದಲ್ಲಿ ಕೊರೊನಾ ಸೋಂಕು ಇಷ್ಟರಲ್ಲಾಗಲೇ ವಿಪರೀತ ಏರುಗತಿಯಲ್ಲಿರಬೇಕಿತ್ತು. ಹಾಗಾಗಿಲ್ಲ ಬದಲಾಗಿ, ಸೋಂಕಿನ ಏರುವಿಕೆಯ ರೇಖೆ ಈಗ ಬಹುತೇಕ ಸಮತಟ್ಟಿಗೆ ಬಂದಿದೆ ಎಂದು ಸಿ.ಕೆ. ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ಲಾಕ್ ಡೌನ್ ನಂತರ ಭಾರತದಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ತೀವ್ರಗೊಂಡಿದೆ. ಈವರೆಗೆ ನಡೆಸಲಾದ ಪರೀಕ್ಷೆಗಳ ಸಂಖ್ಯೆ ಐದು ಲಕ್ಷ ಗಡಿ ದಾಟಿದೆ. 20 ಸಾವಿರಕ್ಕಿಂತ ತುಸು ಹೆಚ್ಚು ಪಾಸಿಟಿವ್ ಕೇಸ್​ಗಳು ಸಿಕ್ಕಿವೆಯಷ್ಟೇ. ಈ ಐದು ಲಕ್ಷ ಪರೀಕ್ಷೆಗಳ ಮಾನದಂಡ ಇಟ್ಟುಕೊಂಡು ಇತರ ಪ್ರಮುಖ ದೇಶಗಳ ಚಿತ್ರಣಕ್ಕೆ ಹೋಲಿಸಿದರೆ ಭಾರತದಲ್ಲಿ ಸೋಂಕಿನ ಸಂಖ್ಯೆ ಕಡಿಮೆ ಇದೆ. ಇಟಲಿಯಲ್ಲಿ 5 ಲಕ್ಷ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ 1 ಲಕ್ಷ ಪಾಸಿಟಿವ್ ಕೇಸ್​ಗಳು ಸಿಕ್ಕಿದ್ದವು. ಬ್ರಿಟನ್​ನಲ್ಲಿ 1.2 ಲಕ್ಷ; ಅಮೆರಿಕ ಮತ್ತು ಟರ್ಕಿಯಲ್ಲಿ 80 ಸಾವಿರ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದಕ್ಕೆ ಹೋಲಿಸಿದಾಗ ಭಾರತದ ಸ್ಥಿತಿ ಉತ್ತಮವಾಗಿದೆ. ಹಾಗೂ ನಮ್ಮ ಪರೀಕ್ಷಾ ತಂತ್ರ ಕೂಡ ಸಮರ್ಪಕವಾಗಿದೆ ಎಂದು ಮಿಶ್ರಾ ಹೇಳುತ್ತಾರೆ.

ಲಾಕ್ ಡೌನ್ ಘೋಷಿಸಿದ್ದು ವೈದ್ಯಕೀಯ ಸಂಪನ್ಮೂಲ ಕ್ರೋಢೀಕರಣಕ್ಕೆ ಅನುಕೂಲವಾಗಿದೆ. ಇದರಿಂದ ಹೆಚ್ಚೆಚ್ಚು ಪ್ರಕರಣಗಳು ಉದ್ಭವಿಸಿದರೆ ಆ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧಗೊಳ್ಳಲು ಸಾಧ್ಯವಾಗುತ್ತಿದೆ. ಸರ್ಕಾರ ಈಗಾಗಲೇ ಮೂರು ಸ್ತರಗಳಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನ ಅಣಿಗೊಳಿಸಿದೆ. ಗಂಭೀರ ಸ್ವರೂಪದ ರೋಗಿಗಳಿಗೆ 1.94 ಲಕ್ಷ ಪ್ರತ್ಯೇಕ ಬೆಡ್​ಗಳು, ಮಾಮೂಲಿಯ ರೋಗಿಗಳಿಗೆ 1.66 ಲಕ್ಷ ಐಸೋಲೇಶನ್ ಬೆಡ್​ಗಳು, 26,644 ಐಸಿಯು ಬೆಡ್​ಗಳು; 12,371 ವೆಂಟಿಲೇಟರ್​ಗಳು ಈಗ ಸಿದ್ಧವಿವೆ. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹೀಗೆ ವಿವಿಧ ಕಡೆಗಳಿಂದ ಕೊರೋನಾ ಪರೀಕ್ಷೆಗಾಗಿ 325 ಲ್ಯಾಬ್​ಗಳ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ:ಹಿಂದೆ ಹೆಚ್​ಐವಿ ಏಡ್ಸ್ ರೋಗದ ಬಗ್ಗೆ ಇದ್ದಂತೆ ಈಗ ಕೊರೋನಾ ಸೋಂಕಿತರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯಗಳು ಮನಸಿಗೆ ಹೊಕ್ಕಿವೆ ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳುತ್ತಾರೆ. ಕೊರೋನಾ ಸೋಂಕಿಗೆ ಒಳಗಾಗಿ ಗುಣಮುಖರಾದ ವ್ಯಕ್ತಿಗಳನ್ನು ಬೇರೆ ಸಾಮಾನ್ಯ ಜನರು ಸಂಶಯದಿಂದಲೇ ನೋಡುತ್ತಾರೆ. ರೋಗದ ಜೊತೆ ಹೋರಾಡಿ ಚೇತರಿಸಿಕೊಂಡವರನ್ನು ಸ್ಫೂರ್ತಿಯಾಗಿ ಪರಿಗಣಿಸುವ ಬದಲು ನಿಕೃಷ್ಟವಾಗಿ ನೋಡುತ್ತಿದ್ದಾರೆ. ಕೊರೋನಾ ಸೋಂಕಿನ ಬಗ್ಗೆ ಜನಸಾಮಾನ್ಯರಲ್ಲಿ ನಿಗೂಢ ಭಯ ಮನೆ ಮಾಡಿದೆ. ಫ್ಲೂ ರೀತಿಯ ರೋಗ ಲಕ್ಷಣಗಳು ಇದ್ದರೂ ಜನರು ಪರೀಕ್ಷೆಗೊಳಪಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಉಸಿರಾಟ ಕಷ್ಟವೆನಿಸಿದ ಸಂದರ್ಭದಲ್ಲಷ್ಟೇ ಅನಿವಾರ್ಯವೆಂಬಂತೆ ಪರೀಕ್ಷೆಗೆ ಬರುತ್ತಾರೆ. ಇದರಿಂದ ಚಿಕಿತ್ಸೆ ನೀಡಿ ಬದುಕಿಸುವುದು ತುಸು ಕಷ್ಟವಾಗುತ್ತದೆ ಎಂದು ವೈದ್ಯಾಧಿಕಾರಿ ಹೇಳುತ್ತಾರೆ.

Comments are closed.