ರಾಷ್ಟ್ರೀಯ

ಮೇ 3ರ ನಂತರ ಪರಿಸ್ಥಿತಿ ವಿನಾಶಕಾರಿಯಾಗಲಿದೆ; ಮನಮೋಹನ್ ಸಿಂಗ್

Pinterest LinkedIn Tumblr


ನವದೆಹಲಿ (ಏಪ್ರಿಲ್ 23); ದೇಶದಲ್ಲಿ ಕೊರೋನಾ ವಿಷಮ ಸ್ಥಿತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಆದರೆ, ದೇಶದ ಎಲ್ಲಾ ನಾಗರೀಕರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸದ ಹೊರತಾಗಿ ಈ ಸೋಂಕನ್ನು ನಿರ್ಮೂಲನೆ ಮಾಡಲು ಪರ್ಯಾಯ ಮಾರ್ಗವಿಲ್ಲ. ಮೇ 03ರ ನಂತರ ಮತ್ತಷ್ಟು ವಿನಾಶಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಗಾಂಧಿ ನೇತೃತ್ವದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿರುವ ಡಾ|ಮನಮೋಹನ್ ಸಿಂಗ್,

“ದೇಶದ ಎಲ್ಲಾ ನಾಗರೀಕರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸದ ಹೊರತಾಗಿ ಇದನ್ನು ನಿಯಂತ್ರಿಸಲು ಬೇರೆ ಮಾರ್ಗವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಿಂದ ಮಾತ್ರ ಇದು ಸಾಧ್ಯ. ನಾವು ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಹಲವು ಸಲಹೆಗಳನ್ನು ನೀಡಿದ್ದೇವೆ. ಆದರೆ, ಇದ್ಯಾವುದನ್ನೂ ಪರಿಗಣಿಸಲಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ದೇಶದಲ್ಲಿ ಪಿಪಿಇ ಕಿಟ್ ಹಾಗೂ ಟೆಸ್ಟಿಂಗ್ ಕಿಟ್ ಪೂರೈಕೆ ಕಡಿಮೆ ಇದೆ. ಪೂರೈಕೆಯಾಗಿರುವ ಕಿಟ್ ಗಳಲ್ಲೂ ದೋಷಗಳು ಕಂಡು ಬಂದಿವೆ. ಸರ್ಕಾರ ಘೋಷಿಸಿದ ಪಡಿತರ ಇನ್ನು ಜನರನ್ನು ತಲುಪಿಲ್ಲ. ಲಾಕ್ ಡೌನ್ ನಿಂದ ರೈತರು, ಕಾರ್ಮಿಕರು, ವಲಸೆ ಕಾರ್ಮಿಕರು ತೀವ್ರ ತೊಂದರೆಗೀಡಾಗಿದ್ದಾರೆ. ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳು ಸ್ಥಗಿತಗೊಂಡಿವೆ .

ಕೋಟ್ಯಂತರ ಜನರ ಬದುಕು ಬೀದಿಗೆ ಬಂದಿದೆ ಸಾಂಕ್ರಾಮಿಕ ರೋಗದಲ್ಲೂ ಕೋಮುವಾದ ಸೃಷ್ಟಿಯಾಗುತ್ತಿದೆ. ಲಾಕ್ ಡೌನ್ ಮೊದಲ ಹಂತದಲ್ಲಿ 12 ಕೋಟಿ ಉದ್ಯೋಗ ನಷ್ಟವಾಗಿದೆ. ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಈ ಕುರಿತು ಕೇಂದ್ರ ಸರ್ಕಾರ ಏನು ಮಾಡಲಿದೆ? ಎಂದು ಪ್ರಶ್ನೆ ಮಾಡಿರುವ ಅವರು, ಲಾಕ್ ಡೌನ್ ನಿಭಾಯಿಸಲು ಪ್ರತಿ ಕುಟುಂಬಕ್ಕೆ ಕೇಂದ್ರ ಸಕಾರ ಮಾಸಿಕ 7,500 ಸರ್ಕಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

Comments are closed.