ರಾಷ್ಟ್ರೀಯ

ದೇಶದಲ್ಲಿ 24 ಗಂಟೆಯಲ್ಲಿ 1,211 ಜನರಿಗೆ ಕೊರೊನಾ ಸೋಂಕು ದೃಢ

Pinterest LinkedIn Tumblr


ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 1,211 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಅಧಿಕೃತವಾಗಿ 10,000 ದಾಟಿದೆ.

ದೇಶದಲ್ಲಿ ಅಧಿಕೃತವಾಗಿ 10,363 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ 339 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ತಿಳಿಸಿದ್ದಾರೆ.

ಇಲ್ಲಿಯವರೆಗೆ ದೇಶದಲ್ಲಿ 1,036 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಂದೇ ದಿನ 179 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.

“ಸಾವಿಗೀಡಾದ 339 ಜನರಲ್ಲಿ 31 ಸೋಂಕಿತರು ಕಳೆದ 24 ಗಂಟೆಯಲ್ಲಿ ಅಸುನೀಗಿದ್ದಾರೆ ಎಂಬುದಾಗಿ ಅವರು ವಿವರಿಸಿದ್ದಾರೆ. ಎಲ್ಲಾ ನಗರ ಮತ್ತು ಜಿಲ್ಲೆಗಳನ್ನು ಏಪ್ರಿಲ್‌ 20ರವರೆಗೆ ಮೌಲ್ಯ ಮಾಪನ ಮಾಡಲಾಗುವುದು. ಈ ಜಿಲ್ಲೆಗಳು ಮತ್ತು ನಗರಗಳಲ್ಲಿ ಕೋವಿಡ್‌-19 ನಿಯಂತ್ರಿಸಲು ಅಧಿಕಾರಿಗಳು ತೆಗೆದುಕೊಂಡ ಕ್ರಮಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು,” ಎಂಬುದಾಗಿ ಅವರು ವಿವರಿಸಿದ್ದಾರೆ.

ಯಾವ ಜಿಲ್ಲೆಗಳು ಮತ್ತು ನಗರಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿವೆಯೋ ಆ ಪ್ರದೇಶಗಳಲ್ಲಿ ಕೆಲವು ನಿರ್ದಿಷ್ಟ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಈ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Comments are closed.