ರಾಷ್ಟ್ರೀಯ

ಮಾರಕ ಕೊರೊನಾ ವೈರಸ್‌ಗೆ ಮೊದಲ ವೈದ್ಯ ಬಲಿ!

Pinterest LinkedIn Tumblr


ಇಂದೋರ್: ಕೊರೊನಾ ವೈರಸ್ ದಾಳಿಯ ಈ ದಿನಗಳಲ್ಲಿ ವೈದ್ಯರು ನಮ್ಮ ಕಣ್ಣ ಮುಂದಿರುವ ದೇವರು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ವೈದ್ಯರ ನಿಸ್ವಾರ್ಥ ಸೇವೆಯನ್ನು ಇಡೀ ದೇಶ ಕೊಂಡಾಡುತ್ತಿದೆ.

ಅಲ್ಲದೇ ತಮ್ಮ ಜೀವದ ಹಂಗು ತೊರೆದು ಇತರರ ಆರೋಗ್ಯಕ್ಕಾಗಿ ದುಡಿಯುತ್ತಿರುವ ವೈದ್ಯಕೀಯ ಸಮುದಾಯಕ್ಕೆ ಹಲವು ರಾಜ್ಯ ಸರ್ಕಾರಗಳು ವಿಶೇಷ ಸುರಕ್ಷಾ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವ ಮೂಲಕ ನೆರವಿಗೂ ಬಂದಿವೆ.

ಅದರಂತೆ ಸ್ಲಂ ನಿವಾಸಿಗಳ ಆರೋಗ್ಯಕ್ಕಾಗಿ ಹಗಲಿರುಳೂ ದುಡಿದ ವೈದ್ಯರೊಬ್ಬರು, ಮಾರಕ ಕೊರೊನಾ ವೈರಸ್‌ಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಲ್ಲಿನ 62 ವರ್ಷದ ಡಾ. ಶತ್ರುಘ್ನ ಪಂಜ್ವಾನಿ ಎಂಬ ವೈದ್ಯ ಮಾರಕ ಕೊರೊನಾ ವೈರಸ್‌ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಡಾ. ಶತ್ರುಘ್ನ ಸಂಕಷ್ಟದ ಸಮಯದಲ್ಲಿ ಸ್ಲಂ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದರು.

ಡಾ. ಶತ್ರುಘ್ನ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಿಲ್ಲವಾದರೂ, ಸ್ಲಂ ನಿವಾಸಿಗಳಲ್ಲಿ ಮಾರಕ ವೈರಾಣು ಹರಡದಂತೆ ತಡೆಗಟ್ಟಲು ಬಹಳ ಶ್ರಮಿಸಿದ್ದರು ಎನ್ನಲಾಗಿದೆ. ಸ್ಲಂ ನಿವಾಸಿಗಳ ನಿರಂತರ ಆರೋಗ್ಯ ತಪಾಸಣೆ ನಡೆಸುತ್ತಿದ್ದ ಡಾ. ಶತ್ರುಘ್ನ, ಅನುಮಾನ ಬಂದ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ದಾಖಲಾಗುಂತೆ ಸೂಚಿಸುತ್ತಿದ್ದರು.

ಈ ನಿಸ್ವಾರ್ಥ ಸೇವೆಯ ನಡುವೆಯೇ ಡಾ. ಶತ್ರೂಘ್ನ ಪಂಜ್ವಾನಿ ಅವರಿಗೆ ಕೊರೊನಾ ವೈರಸ್ ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದೋರ್‌ನ ಶ್ರೀ ಅರಬಿಂದೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇನ್ನು ಡಾ. ಶತ್ರುಘ್ನ ಪಂಜ್ವಾನಿ ಅವರ ಸಾವಿನ ಮೂಲಕ ದೇಶದಲ್ಲಿ ಈ ಮಾರಕ ವೈರಾಣುವಿಗೆ ಮೊದಲ ವೈದ್ಯ ಬಲಿಯಾದಂತಾಗಿರುವುದು ನಿಜಕ್ಕೂ ದುರಂತ ಎನ್ನಬಹುದು.

Comments are closed.