
ಹೊಸದಿಲ್ಲಿ: ಕಚ್ಚಾ ತೈಲದ ದರ ಇಳಿಕೆಯಿಂದ ಕಳೆದ 6 ವರ್ಷಗಳಲ್ಲಿ ಕೇಂದ್ರ ಸರಕಾರಕ್ಕೆ 20 ಲಕ್ಷ ಕೋಟಿ ರೂ. ಲಾಭವಾಗಿದೆ. ಈ ಲಾಭವನ್ನು ಕೊರೊನಾ ಸಂಕಷ್ಟದ ಸಂದರ್ಭದಲ್ಲಾದರೂ ಸರಕಾರವು ಜನರಿಗೆ ವರ್ಗಾಯಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಒತ್ತಾಯಿಸಿದ್ದಾರೆ.
“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ತೀವ್ರ ಇಳಿಕೆಯಾಗಿದೆ. ಇದರ ಲಾಭದಲ್ಲಿ ಒಂದಿಷ್ಟು ಭಾಗವನ್ನಾದರೂ ದೇಶದ ಜನರಿಗೆ ಸರಕಾರವು ವರ್ಗಾಯಿಸಬೇಕು. ಇದು ಲಾಭ ಗಳಿಸುವ ಸಮಯವಲ್ಲ,” ಎಂದು ಹೇಳಿದ್ದಾರೆ.
“ತೆರಿಗೆ ಇಳಿಕೆ ಅಥವಾ ಇತರೆ ಮಾರ್ಗಗಳ ಮೂಲಕ ಕೊರೊನಾ ಹೊಡೆತದಿಂದ ತತ್ತರಿಸಿದ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರಿಗೆ ಸರಕಾರ ನೆರವು ನೀಡಬೇಕು. 2014ರ ಮಾರ್ಚ್‌ನಲ್ಲಿ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 108 ಡಾಲರ್ ಇತ್ತು. 2020ರ ಮಾರ್ಚ್‌ನಲ್ಲಿ ಕೇವಲ 23 ಡಾಲರ್‌ಗೆ ಇಳಿದಿದೆ. ಈ ಐತಿಹಾಸಿಕ ದರ ಇಳಿಕೆಯ ಲಾಭವನ್ನು ಸರಕಾರವು ಜನರಿಗೂ ಹಂಚಬೇಕು,’’ ಎಂದು ಆಗ್ರಹಿಸಿದ್ದಾರೆ.
ಡೀಸೆಲ್ ಮಾರಾಟ ಶೇ. 24 ಕುಸಿತ
ಲಾಕ್ ಡೌನ್ ಪರಿಣಾಮ ಮಾರ್ಚ್‌ನಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಅನುಕ್ರಮವಾಗಿ ಶೇ. 15.5 ಮತ್ತು ಶೇ. 24ರಷ್ಟು ಕುಸಿದಿದೆ. ಅಲ್ಲದೇ ವಿಮಾನ ಇಂಧನ (ಎಟಿಎಫ್) ಮಾರಾಟ ಶೇ. 31.6ರಷ್ಟು ಇಳಿಕೆಯಾಗಿದೆ.
ಕೋವಿಡ್-19 ಪರಿಣಾಮ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದೆ. ಅಗತ್ಯ ವಾಹನಗಳಷ್ಟೇ ರಸ್ತೆಯಲ್ಲಿವೆ. ವಿಮಾನ ಸೇವೆಯನ್ನೂ ರದ್ದುಗೊಳಿಸಲಾಗಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ಗೆ ಬೇಡಿಕೆ ತಗ್ಗಿದೆ.
ಪೆಟ್ರೋಲ್, ಡೀಸೆಲ್, ಎಟಿಎಫ್‌ಗೆ ಬೇಡಿಕೆ ತಗ್ಗಿದ್ದರೆ, ಅಡುಗೆ ಅನಿಲದ ಸಿಲಿಂಡರ್‌ಗಳ(ಎಲ್‌ಪಿಜಿ) ಮಾರಾಟ ಏರಿಕೆಯಾಗಿದೆ. ಲಾಕ್‌ಡೌನ್‌ನಿಂದ ತೊಂದರೆಯಾಗಬಹುದು ಎನ್ನುವ ಭಯದಿಂದ ಗ್ರಾಹಕರು, ಹೆಚ್ಚುವರಿ ಸಿಲಿಂಡರ್‌ಗಳನ್ನು ಸ್ಟಾಕ್ ಮಾಡುತ್ತಿದ್ದಾರೆ.
Comments are closed.