
ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಿದ ಲಾಕ್ ಡೌನ್ ಅಥವಾ ಅಧಿಕಾರಿಗಳ ಸೂಚನೆ ಉಲ್ಲಂಘಿಸುತ್ತಾರೋ ಅಂತಹವರನ್ನು ಒಂದು, ಎರಡು ವರ್ಷ ಜೈಲಿಗೆ ತಳ್ಳಿ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಠಿಣ ಸಂದೇಶ ರವಾನಿಸಿದೆ.
ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಉಲ್ಲಂಘಿಸಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ನಿಲುವು ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ.
ವೈದ್ಯರು, ಆರೋಗ್ಯ ಸಿಬ್ಬಂದಿಗಳು ಅಥವಾ ಸರ್ಕಾರಿ ಅಧಿಕಾರಿಗಳ ಮೇಳೆ ಯಾರು ಹಲ್ಲೆ ನಡೆಸುತ್ತಾರೋ ಅವರನ್ನು ಜೈಲಿಗೆ ಕಳುಹಿಸಿ. ಒಂದು ವೇಳೆ ಇಂತಹ(ವೈದ್ಯರ ಮೇಲೆ ಹಲ್ಲೆ ಇನ್ನಿತರ) ಘಟನೆಯಿಂದ ಯಾರಾದರೂ ಸಾವು ನೋವಿಗೆ ಕಾರಣರಾದರೆ ಅಂತಹವರನ್ನು ಎರಡು ವರ್ಷ ಜೈಲಿಗೆ ಕಳುಹಿಸಿ ಎಂದು ನಿರ್ದೇಶನ ನೀಡಿದೆ.
ಯಾರು ಆದೇಶವನ್ನು ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ರಾಜ್ಯ ಸರ್ಕಾರಗಳಿಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ. ಯಾರು ಹಣಕ್ಕಾಗಿ ಸುಳ್ಳು ವದಂತಿ ಹಬ್ಬಿಸುತ್ತಾರೋ ಅವರನ್ನು ಕೂಡಾ ಎರಡು ವರ್ಷ ಜೈಲಿಗೆ ಕಳುಹಿಸಿ ಎಂದು ತಿಳಿಸಿದ್ದಾರೆ.
Comments are closed.