
ನವದೆಹಲಿ (ಮಾ.29): ಕೊರೋನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿದ್ದರು. ಇದರಿಂದ ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಕ್ಷಮೆ ಕೋರಿದ್ದಾರೆ.
“ನಾನು ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಬಡವರಿಗೆ ನನ್ನ ಮೇಲೆ ಕೋಪ ಬಂದಿದೆ. ಏಕೆ ಈ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ನನಗೆ ಬೇರೆ ದಾರಿಯೇ ಇರಲಿಲ್ಲ. ಈ ರೀತಿಯ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಆದರೆ, ಬೇರೆ ದೇಶಗಳ ಸ್ಥಿತಿ ನೋಡಿದಾಗ ಈ ರೀತಿಯ ಕ್ರಮ ಸರಿ ಎನ್ನಿಸುತ್ತದೆ,” ಎಂದರು.
ಸಮಸ್ಯೆ ಉಲ್ಬಣಿಸುವ ಮೊದಲೇ ಕ್ರಮ ಕೈಗೊಳ್ಳುವುದು ಉತ್ತಮ ಎಂದಿರುವ ಅವರು, “ಸಮಸ್ಯೆಗಳು ಅಥವಾ ರೋಗಗಳು ಹೆಚ್ಚುವ ಮೊದಲೆ ನಾವು ಕ್ರಮ ಕೈಗೊಳ್ಳಬೇಕು. ಕೊರೋನಾ ವೈರಸ್ ಎಲ್ಲರಿಗೂ ಹಾನಿ ಉಂಟು ಮಾಡುತ್ತಿದೆ. ಈ ವೈರಸ್ ವಿರುದ್ಧ ಎಲ್ಲರೂ ಹೋರಾಡಬೇಕಿದೆ,” ಎಂದು ಕರೆ ನೀಡಿದರು.
ದೇಶದಲ್ಲಿ ಅನೇಕರು ಲಾಕ್ಡೌನ್ ನಿಯಮವನ್ನು ಮೀರಿದ್ದರು. ಈ ವಿಚಾರವಾಗಿ ಮಾತನಾಡಿರುವ ಮೋದಿ, “ಎಲ್ಲರೂ ಬಂದ್ ಆದೇಶವನ್ನು ಪಾಲಿಸಬೇಕು. ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು ಈ ಮೂಲಕ ಲಾಕ್ಡೌನ್ ಯಶಸ್ವಿಗೊಳಿಸಬೇಕು,” ಎಂದು ಕೋರಿದರು.
ನರೇಂದ್ರ ಮೋದಿ ಮನ್ ಕಿ ಬಾತ್ನಲ್ಲಿ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. “ಸಾಕಷ್ಟು ಜನರು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ವೈದ್ಯರು, ನರ್ಸ್ಗಳು ಮತ್ತು ಔಷಧಾಲಯದವರು ಕೊರೋನಾ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರು ಮೊದಲ ಸಾಲಿನ ಸೈನಿಕರು,” ಎಂದು ಶ್ಲಾಘಿಸಿದರು.
Comments are closed.