ರಾಷ್ಟ್ರೀಯ

ಲಾಕ್ ಡೌನ್ ನ್ನು ಪಾಲಿಸದಿದ್ದರೆ ಕೊರೋನಾ ವೈರಸ್ ವಿರುದ್ಧ ಬಚಾವಾಗಲು, ಅಪಾಯದಿಂದ ರಕ್ಷಿಸಿಕೊಳ್ಳಲು ಕಷ್ಟ: ಮೋದಿ

Pinterest LinkedIn Tumblr

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳಲ್ಲಿ ಕ್ಷಮೆ ಕೋರಿದ್ದಾರೆ. ಅದಕ್ಕೆ ಕಾರಣ 21 ದಿನಗಳ ಭಾರತ ಲಾಕ್ ಡೌನ್.

ಇಂದು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಭಾಷಣ ಮಾಡಿದ ಅವರು, ಆರಂಭದಲ್ಲಿಯೇ ದೇಶದ ಜನತೆ ಮುಂದೆ ಕ್ಷಮೆ ಕೋರಿದರು. ‘’ನಾನು ಇಷ್ಟೊಂದು ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ನಿಮ್ಮ ಜೀವನಕ್ಕೆ ತೊಂದರೆಯಾಗಿದೆ, ಅದರಲ್ಲೂ ಬಡವರಿಗೆ ಬಹಳ ಕಷ್ಟವಾಗುತ್ತಿದೆ. ನಿಮ್ಮಲ್ಲಿ ಹಲವರಿಗೆ ನನ್ನ ಮೇಲೆ ಸಿಟ್ಟು ಬರಬಹುದು. ಆದರೆ ಕೊರೋನಾ ವೈರಸ್ ಎಂಬ ಶತ್ರುವಿನ ವಿರುದ್ಧ ಹೋರಾಡಲು ನನಗೆ ಬೇರೆ ಮಾರ್ಗವಿಲ್ಲ, ಲಾಕ್ ಡೌನ್ ಮಾಡುವ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದ, ಭಾರತೀಯರ ಸುರಕ್ಷತೆ ನಮಗೆ ಮುಖ್ಯವಾಗಿದೆ’’ಎಂದರು.

ಈ ಸಂದರ್ಭದಲ್ಲಿ ಯಾರು ಕೂಡ ಕಾನೂನನ್ನು ಬೇಕೆಂದೇ ದುರುದ್ದೇಶಪೂರ್ವಕವಾಗಿ ಮುರಿಯಲು ನೋಡುವುದಿಲ್ಲ, ಆದರೂ ಕೆಲವರು ನಿಯಮ ಮುರಿಯಲು ನೋಡುತ್ತಿದ್ದಾರೆ. ಅಂತವರಿಗೆ ನಾನು ಹೇಳುವುದೊಂದೇ, ಈ ಲಾಕ್ ಡೌನ್ ನ್ನು ಪಾಲಿಸದಿದ್ದರೆ ಕೊರೋನಾ ವೈರಸ್ ವಿರುದ್ಧ ಬಚಾವಾಗಲು, ಅಪಾಯದಿಂದ ರಕ್ಷಿಸಿಕೊಳ್ಳಲು ಕಷ್ಟವಾಗುತ್ತದೆ ಎಂದರು.

ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುವುದೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಸಾವು, ಬದುಕಿನ ನಡುವೆ ನಡೆಸುತ್ತಿರುವ ಹೋರಾಟ, ಹೀಗಾಗಿ ಸಂಪೂರ್ಣ ಬಂದ್ ಅನಿವಾರ್ಯವಾಗಿದೆ. ಪ್ರಾರಂಭದಲ್ಲಯೇ ಇದನ್ನು ಮಟ್ಟಹಾಕಬೇಕಾಗಿದ್ದು ಆ ನಿಟ್ಟಿನಲ್ಲಿ ಭಾರತ ಕೆಲಸ ಮಾಡುತ್ತಿದೆ. ಇಡೀ ಮನುಕುಲವನ್ನು ಸಂಹಾರ ಮಾಡಲು ಕೊರೋನಾ ವೈರಸ್ ನೋಡುತ್ತಿದೆ, ಈ ಸಂದರ್ಭದಲ್ಲಿ ಮನುಷ್ಯರು ಒಟ್ಟಾಗಿ ಅದನ್ನು ಹೊಡೆದೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೆಲವು ಷರತ್ತುಗಳನ್ನು ಕಡ್ಡಾಯವಾಗಿ ನಾಗರಿಕರು ಪಾಲಿಸಲೇ ಬೇಕು ಎಂದಿದ್ದಾರೆ, ಅವು

-ಇನ್ನಷ್ಟು ದಿನ ನಾಗರಿಕರು ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಮನೆಯಲ್ಲಿಯೇ ಉಳಿದುಕೊಳ್ಳಬೇಕು.

-ಸ್ವ ನಿರ್ಬಂಧ ಕ್ರಮ ಕೈಗೊಳ್ಳದಿದ್ದವರು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇಂದು ಪಶ್ಚಾತ್ತಾಪ ಪಡುತ್ತಿರುವುದು ನಮ್ಮ ಕಣ್ಣ ಮುಂದೆಯೇ ನೋಡುತ್ತಿದ್ದೇವೆ,

-ಈ ಕೊರೋನಾ ಸೋಂಕು ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್ ಗಳು, ಪಾರಾ ಮೆಡಿಕಲ್ ಸಿಬ್ಬಂದಿ, ಯೋಧರು, ಪೊಲೀಸರು, ಮಾಧ್ಯಮದವರಿಂದ ಸ್ಪೂರ್ತಿ ಪಡೆಯಬೇಕು ಎಂದಿದ್ದಾರೆ.

Comments are closed.