ರಾಷ್ಟ್ರೀಯ

21 ದಿನ ಭಾರತ ಸಂಪೂರ್ಣ ಬಂದ್– ಮೋದಿ ಅಧಿಕೃತ ಘೋಷಣೆ

Pinterest LinkedIn Tumblr


ನವದೆಹಲಿ: ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯರಾತ್ರಿ (ಮಾ.24)ಯಿಂದಲೇ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇಂದು ಮಧ್ಯರಾತ್ರಿಯಿಂದಲೇ ಭಾರತ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಈ ಲಾಕ್‍ಡೌನ್ ನಿಂದಾಗುವ ನಷ್ಟವನ್ನು ದೇಶ ಭರಿಸಬೇಕಿದೆ. ಆದ್ರೆ ಇಂದು ದೇಶದ ಪ್ರತಿಯೊಬ್ಬರ ಜೀವದ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಇಂದು ನೀವು ದೇಶದ ಯಾವುದೇ ಭಾಗದಲ್ಲಿದ್ದರೂ, ಅಲ್ಲಿಯೇ ಉಳಿದುಕೊಳ್ಳಬೇಕು. ಮುಂದಿನ ಮೂರು ವಾರಗಳ ಕಾಲ ಭಾರತ ಸಂಪೂರ್ಣ ಲಾಕ್‍ಡೌನ್ ಆಗಲಿದೆ.

ಒಂದು ವೇಳೆ 21 ದಿನದಲ್ಲಿ ನಾವು ಕೊರೊನಾ ವಿರುದ್ಧ ಗೆಲುವು ಸಾಧಿಸದಿದ್ದರೆ, 21 ವರ್ಷಗಳ ಹಿಂದೆ ಭಾರತ ಹೋಗಲಿದೆ. 21 ದಿನ ಮನೆಯಿಂದ ಹೊರ ಬರೋದನ್ನು ಮರೆತು ಬಿಡಿ. ಮನೆಯಲ್ಲಿರಿ, ನಿಮ್ಮ ಮನೆಯಲ್ಲಿರಿ. ನಿಮ್ಮ ಮನೆಯ ಬಾಗಿಲು ಮುಂದೆ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು.

22 ಮಾರ್ಚ್ ಭಾನುವಾರದಂದು ನಾವೆಲ್ಲರೂ ಜನತಾ ಕರ್ಫ್ಯೂನಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದೇವೆ. ಪ್ರತಿಯೊಂದು ವರ್ಗದ ಜನ ನಮ್ಮ ಜೊತೆ ಬಂದರು. ಪ್ರತಿ ಭಾರತದ ವಾಸಿ ಜನತಾ ಕರ್ಫ್ಯೂ ಯಶಸ್ವಿಯಾಗುವಂತೆ ಮಾಡಿದರು ಎಂದು ಜನರಿಗೆ ಧ್ಯನವಾದ ತಿಳಿಸಿದರು.

ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ವಿಶ್ವದಲ್ಲಿ ಏನಾಗ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳನ್ನು ಸಹ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕೊರೊನಾದಿಂದ ಬದುಕುಳಿಯಬಹುದು. ಕೊರೊನೊ ವೈರಸ್ ಕೊಲ್ಲಲು ಅದರ ಚೈನ್ ಅನ್ನು ನಾವು ಕಡಿತಗೊಳಿಸಬೇಕಿದೆ.

ಸೋಶಿಯಲ್ ಡಿಸ್ಟನ್ಸ್ ಪ್ರತಿ ವ್ಯಕ್ತಿ, ಕುಟುಂಬ ಮತ್ತು ಪ್ರಧಾನ ಮಂತ್ರಿಗೂ ಇದೆ. ಕೊರೊನಾ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಇಂತಹ ಬೇಜವಾಬ್ದಾರಿತನ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅದು ಎಷ್ಟು ದೊಡ್ಡ ಬೆಲೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ರಾತ್ರಿ 12 ಗಂಟೆಯಿಂದ ಸಂಪೂರ್ಣ ಭಾರತ ಲಾಕ್‍ಡೌನ್ ಆಗಲಿದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಈ ಮಹಾಮಾರಿಯ ಸೋಂಕಿತ ಓರ್ವ ವ್ಯಕ್ತಿ ಅಸಂಖ್ಯ ಜನರಿಗೆ ಸೋಂಕು ತಗುಲಿಸಬಹುದು. 1 ಲಕ್ಷ ಜನರಿಗೆ ಸೋಂಕು ತಗಲು 63 ದಿನ ಬೇಕಾಗಿತ್ತು. ಆದ್ರೆ ಮುಂದಿನ 11 ದಿನಗಳಲ್ಲಿ ಮತ್ತೆ 1 ಲಕ್ಷ ಜನರಿಗೆ ಸೋಂಕು ತಗುಲಿದೆ. ಮತ್ತೆ ಕೆಲವೇ ದಿನಗಳಲ್ಲಿ ಮೂರು ಲಕ್ಷಕ್ಕೆ ಸೋಂಕಿತರು ತಲುಪಿದ್ರು. ಈ ಸಂಖ್ಯೆಗಳ ಮೂಲಕ ಕೊರೊನಾ ಎಷ್ಟು ಭಯಾನಕ ಎಂದು ನೀವು ಊಹಿಸಬಹುದು.

ಪೌರ ಕಾರ್ಮಿಕರು, ವೈದ್ಯರು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ನಿಮ್ಮಲ್ಲಿ ಜಾಗೃತಿ ಮೂಡಿಸಲು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪೊಲೀಸರನ್ನು ಗಮನಿಸಿ. ನಿಮ್ಮ ಕುಟುಂಬದ ರಕ್ಷಣೆಗಾಗಿ ಒತ್ತಡಗಳ ನಡುವೆಯೂ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಜೀವ ಉಳಿಸಲು ಲಾಕ್‍ಡೌನ್ ಮಾಡಲಾಗುತ್ತಿದೆ. ಇಂದು ನಾನು ಪ್ರಧಾನಿ ಮಂತ್ರಿಯಾಗಿ ಈ ವಿಷಯವನ್ನು ಹೇಳುತ್ತಿಲ್ಲ. ನಿಮ್ಮ ಕುಟುಂಬದ ಓರ್ವ ಸದಸ್ಯನಾಗಿ ಹೇಳುತ್ತಿದ್ದೇನೆ.

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ. ಮೀಸಲು ನೀಡಲಾಗುತ್ತಿದೆ. ಹೆಲ್ತ್ ಕೇರ್ ಗೆ ಮೊದಲ ಪ್ರಾಮುಖ್ಯತೆ ನೀಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಗಳ ಜೊತೆ ಮಾತನಾಡಿದ್ದೇನೆ. ಖಾಸಗಿ ಸಂಸ್ಥೆಗಳು ಸಹ ಕೊರೊನಾ ಜಾಗೃತಿಗೆ ಮುಂದಾಗುತ್ತಿವೆ ಎಂಬ ನಂಬಿಕೆ ಇದೆ. ಕೊರೊನಾ ಸಂಬಂಧ ಮೂಢನಂಬಿಕೆಗಳಿಗೆ ಬಲಿಯಾಗದಿರಿ. ಆರೋಗ್ಯದಲ್ಲಿ ಏರುಪೇರಾದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ವೈದ್ಯರ ಸಲಹೆ ಪಡೆಯದೇ ಯಾವುದೇ ಮಾತ್ರೆ ತೆಗೆದುಕೊಳ್ಳಬೇಡಿ.

Comments are closed.