ನವದೆಹಲಿ: ಕೊರೊನಾ ವೈರಸ್ ಗೆ ಜಗತ್ತೇ ಬೆಚ್ಚಿ ಬಿದ್ದಿದೆ. ಸಾವಿನ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಏತನ್ಮಧ್ಯೆ ಕೊರೊನಾ ವೈರಸ್ ಗೆ ತುತ್ತಾಗಿದ್ದ ದೆಹಲಿಯ ರೋಗಿ ಇದೀಗ 14 ದಿನಗಳ ಚಿಕಿತ್ಸೆ ನಂತರ ಗುಣಮುಖರಾಗಿದ್ದು ಶನಿವಾರ ಸಂಜೆ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು ಕೊರೊನಾ ಬಗ್ಗೆ, ಅದರ ಚಿಕಿತ್ಸೆ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪೂರ್ವ ದೆಹಲಿಯ 45 ವರ್ಷದ ಈ ವ್ಯಕ್ತಿ ಇಟಲಿಯಲ್ಲಿ ನಡೆದ ರಫ್ತು ಮೇಳದಲ್ಲಿ ಭಾಗವಹಿಸಿದ್ದು ನಂತರ ಮಿಲಾನ್, ಬುಡಾಪೆಸ್ಟ್ ಹಾಗೂ ವಿಯೆನ್ನಾಕ್ಕೆ ತನ್ನಿಬ್ಬರು ಸಹೋದರ ಜತೆ ಭೇಟಿ ನೀಡಿದ್ದರು. ಭಾರತಕ್ಕೆ ಆಗಮಿಸಿದ ವೇಳೆ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿತ್ತು.
14 ದಿನಗಳ ನಂತರ ಕುಟುಂಬದ ಸದಸ್ಯರ ಭೇಟಿ!
14 ದಿನಗಳ ಚಿಕಿತ್ಸೆ ನಂತರ ಈ ವ್ಯಕ್ತಿ ಮನೆಗೆ ಭೇಟಿ ನೀಡಿದ್ದರು. ಕೊರೊನಾ ಪಾಸಿಟಿವ್ ಎಂದು ವರದಿ ಬಂದು ಮಗ ಆಸ್ಪತ್ರೆಗೆ ಹೊರಟ ವೇಳೆ 65ವರ್ಷದ ತಾಯಿ ಕಣ್ಣೀರು ಹಾಕಿದ್ದರು. ಇಂದು ನನಗೆ ಭಾವನಾತ್ಮಕ, ಸಂತಸದ ದಿನವಾಗಿದೆ. ನಾನು ಎಲ್ಲರನ್ನೂ ಭೇಟಿಯಾಗಿದ್ದೇನೆ. ಇಡೀ ಕುಟುಂಬವೇ ನನಗಾಗಿ ಕಾಯುತ್ತಿತ್ತು ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಭಾನುವಾರ ಗೆಳೆಯರು, ಆಪ್ತರು ಸೇರಿದಂತೆ ಬಿಡುವಿಲ್ಲದಷ್ಟು ಮೊಬೈಲ್ ಕರೆಗಳನ್ನು ಸ್ವೀಕರಿಸಿದ್ದಾರಂತೆ..ಎಲ್ಲರೂ ರೋಗ ಲಕ್ಷಣ, ವೈದ್ಯಕೀಯ ಸೇವೆ ಹಾಗೂ ಪರೀಕ್ಷೆಗಳ ಕುರಿತು ಪ್ರಶ್ನೆಗಳ ಸುರಿಮಳೆಗೆರೆದಿದ್ದರು ಎಂದು ವರದಿ ವಿವರಿಸಿದೆ.
ಕೊರೊನಾ ಕುರಿತು ಕುತೂಹಲದ ಪ್ರಶ್ನೆಗಳು!
ಆಪ್ತ ಗೆಳೆಯನೊಬ್ಬ ಮಾಡಿರುವ ಕರೆ ಬಗ್ಗೆ ಮೆಲುಕು ಹಾಕಿರುವ ದೆಹಲಿ ವ್ಯಕ್ತಿ, ಒಂದು ವೇಳೆ ಕೊರೊನಾ ವೈರಸ್ ಪತ್ತೆ ಹಚ್ಚಲು ನಡೆಸುವ ಪರೀಕ್ಷೆ ನೋವು ತರುತ್ತದೆಯಾ ಎಂದು ಪ್ರಶ್ನಿಸಿದ್ದರಂತೆ. ನಾನು ಪರೀಕ್ಷೆ ನಡೆಸುವ ವಿಧಾನ ಮತ್ತು ಮುನ್ನೆಚ್ಚರಿಕೆ ಬಗ್ಗೆ ವಿವರಿಸಿದ್ದೆ. ಇದರಿಂದಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಡುವಾಗ ನನ್ನ ಮನಸ್ಸಿನಲ್ಲಿ ಇದ್ದಿದ್ದು ಕೊರೊನಾ ಬಗ್ಗೆ ಅರಿವು ಮೂಡಿಸುವುದು. ಅಷ್ಟೇ ಅಲ್ಲ ಭಾರತದಲ್ಲಿ ಅತ್ಯುತ್ತಮ ವ್ಯವಸ್ಥೆಯ ಚಿಕಿತ್ಸೆಯ ಸೌಲಭ್ಯ ನನಗೆ ದೊರಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಸೋಲೇಶನ್ ವಾರ್ಡ್ ಭಯ ಬೇಡ:
ಈ ವ್ಯಕ್ತಿ ಐಸೋಲೇಶನ್ (ಪ್ರತ್ಯೇಕ) ವಾರ್ಡ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ನಿಟ್ಟಿನಲ್ಲಿ ಪ್ರತ್ಯೇಕ ಕೊಠಡಿ ಬಗ್ಗೆ ಹಬ್ಬಿರುವ ಆತಂಕದ ಬಗ್ಗೆಯೂ ಮಾತನಾಡಿದ್ದಾರೆ. ಜನರು ಐಸೋಲೇಶನ್ ವಾರ್ಡ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ರೋಗಿಗಳಿಗಾಗಿ ಪ್ರತ್ಯೇಕವಾಗಿರಿಸುವ ಈ ಕೋಣೆ ಸಿಂಗಲ್ ಬೆಡ್ ರೂಂ ರೀತಿ ಇರಲಿದೆ. ಇಲ್ಲಿ ಉತ್ತಮ ಗುಣಮಟ್ಟದ ಗೈಡ್ ಲೈನ್ಸ್ ಪ್ರಕಾರ ಇರಿಸಲಾಗುತ್ತದೆ. ಒಂದು ವೇಳೆ ನಿಮಗೆ ವೈದ್ಯಕೀಯ ಸಹಾಯದಿಂದಲೇ ವೈರಸ್ ಗುಣಮುಖವಾಗಬೇಕು ಅಂತ ಇದ್ದಾಗ ಐಸೋಲೇಶನ್ ವಾರ್ಡ್ ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
Comments are closed.