ರಾಷ್ಟ್ರೀಯ

ದೇಶಾದ್ಯಾಂತ ಸಂಚಲನ ಮಾಡಿದ್ದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣ- ಅಮೃತಾ ತಂದೆ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ದೇಶಾದ್ಯಾಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪುತ್ರಿ ಅಮೃತಾ ತನಗೆ ಇಷ್ಟವಿಲ್ಲದೆ ದಲಿತ ಯುವಕನೊಂದಿಗೆ ಮದುವೆಯಾದ ಕಾರಣ ಅಳಿಯ ಪ್ರಣಯ್‍ನನ್ನು ಕಳೆದ 2 ವರ್ಷಗಳ ಹಿಂದೆ ಸುಪಾರಿ ನೀಡಿ ಮಾರುತಿ ರಾವ್ ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ಇತ್ತಿಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದನು. ಈ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾರುತಿ ರಾವ್ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಮಾರುತಿ ರಾವ್ ಪತ್ನಿ ನೀಡಿದ ಮಾಹಿತಿ ಮೇರೆಗೆ ಆರ್ಯವೈಶ್ಯ ಭವನದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದರು. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಆ ವೇಳೆಗಾಗಲೇ ಸಾವನ್ನಪ್ಪಿರುವುದು ತಿಳಿದುಬಂದಿತ್ತು. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾರುತಿ ರಾವ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಆಂಧ್ರಪ್ರದೇಶದ ನಲ್ಗೋಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿಯಾಗಿದ್ದ ಮಾರುತಿ ರಾವ್ ರಿಯಲ್ ಎಸ್ಟೇಟ್ ವ್ಯವಹಾರದಿಂದ ಕೋಟಿ ಕೋಟಿ ಆಸ್ತಿ ಗಳಿಸಿದ್ದರು. ಆ ವೇಳೆ ಮಾರುತಿ ರಾವ್ ಪುತ್ರಿ ಅಮೃತಾ ದಲಿತ ಯುವಕ ಪ್ರಣಯ್‍ನನ್ನು ಪ್ರೀತಿಸಿ ವಿವಾಹವಾಗಿದ್ದರು. ಇದನ್ನು ಸಹಿಸದ ಮಾರುತಿ ರಾವ್ 2018ರ ಸೆ.15 ರಂದು ಐದು ತಿಂಗಳ ಗರ್ಭಿಣಿ ಅಮೃತ ಪತಿಯೊಂದಿಗೆ ನರ್ಸಿಂಗ್ ಹೋಮ್‍ಗೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಪ್ರಣಯ್‍ನನ್ನು ಕೊಲೆ ಮಾಡಿದ್ದರು. ಅದಕ್ಕೂ ಮುನ್ನವೇ ಆತನ ಕೊಲೆಗೆ 4 ಬಾರಿ ಪ್ರಯತ್ನಿಸಿದ್ದಾಗಿ ಮಾರುತಿ ರಾವ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ.

ಪ್ರಕರಣದಲ್ಲಿ ಮಾರುತಿ ರಾವ್ ಹಾಗೂ ಆತನ ಸಹೋದರ ಸೇರಿದಂತೆ ಹಂತಕನ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ವಾರಂಗಲ್ ಸೆಂಟ್ರಲ್ ಜೈಲಿನಲ್ಲಿದ್ದ ಮಾರುತಿ ರಾವ್ ಕೆಲ ದಿನಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ.

ಆಸ್ತಿಗಾಗಿ ಒತ್ತಡ: ಕೊಲೆ ಪ್ರಕರಣದಲ್ಲಿ ಸಹೋದರರಿಬ್ಬರು ಜೈಲು ಪಾಲಾಗಿದ್ದರು. ಇತ್ತ ಪುತ್ರಿ ಅಮೃತಾ ಕೂಡ ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದ ಹಿನ್ನೆಲೆಯಲ್ಲಿ ಕೋಟಿ ಕೋಟಿ ಮೌಲ್ಯದ ಮಾರುತಿ ರಾವ್ ಆಸ್ತಿಯನ್ನು ತನ್ನ ಮಕ್ಕಳ ಹೆಸರಿಗೆ ಮಾಡಿಕೊಂಡು ಸಹೋದರ ಒತ್ತಡ ಹಾಕಿದ್ದ ಎನ್ನಲಾಗಿದೆ. ಆಸ್ತಿಗಾಗಿ ಸಹೋದರ ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮಾರುತಿರಾವ್ ಹೆಚ್ಚು ಹೈದರಾಬಾದ್‍ನಲ್ಲೇ ಉಳಿದುಕೊಳ್ಳುತ್ತಿದ್ದ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿರಬಹುದು ಎಂಬ ಶಂಕೆ ಮೂಡಿದೆ.

Comments are closed.