ರಾಷ್ಟ್ರೀಯ

ವಿದೇಶಕ್ಕೆ ಹೋಗಲು ತಯಾರಾಗಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕನ ಮಗಳಿಗೆ ತಡೆ

Pinterest LinkedIn Tumblr


ನವದೆಹಲಿ: ಯೆಸ್ ಬ್ಯಾಂಕ್ ಮುಳುಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿರುವ ಜಾರಿ ನಿರ್ದೇಶನಾಲಯಕ್ಕೆ ತನಿಖೆಯ ವೇಳೆ ಬೆಚ್ಚಿಬಿಳುವ ವಿಚಾರಗಳು ಬಯಲಾಗುತ್ತಿವೆ.

ಅಕ್ರಮ ಹಣ ರವಾನೆ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಡ್ರಿಲ್ ನಡೆಸುತ್ತಿರುವ ಇಡಿ, ಬಗೆದಷ್ಟು ಬಯಲಾಗ್ತಿರುವ ಕರ್ಮಕಾಂಡಗಳನ್ನು ಕಂಡು ಶಾಕ್ ಆಗಿದೆ. ಹೀಗಾಗಿಯೇ ಇಂದು ನಸುಕಿನ ರಾಣಾ ಕಪೂರ್ ಅವರನ್ನು ಬಂಧಿಸಿದ ಇಡಿ, ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.

ದೇಶ ಬಿಟ್ಟು ಹೋಗಲು ಯತ್ನಿಸಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪುತ್ರಿ ರೋಶಿನಿ ಕಪೂರ್ ಅವರನ್ನು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಶಕ್ಕೆ ಪಡೆಯಲಾಗಿದೆ. ರೋಶಿನಿ ಕಪೂರ್ ಬ್ರಿಟಿಷ್ ಏರ್ ವೇಸ್ ಮೂಲಕ ಲಂಡನ್‍ಗೆ ತೆರಳಲು ಮುಂದಾಗಿದ್ದರು ಎಂದು ವರದಿಯಾಗಿದೆ.

‘ರೋಶಿನಿ ಕಪೂರ್ ವಿರುದ್ಧ ನೋಟಿಸ್ ಹೊರಡಿಸಿದ್ದರಿಂದ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು. ರಾಣಾ ಕಪೂರ್, ಅವರ ಪತ್ನಿ ಬಿಂದು ಹಾಗೂ ಮೂವರು ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರು ಕಿಕ್‍ಬ್ಯಾಕ್ ಸ್ವೀಕರಿಸಲು 20ಕ್ಕೂ ಹೆಚ್ಚು ಶೆಲ್ ಕಂಪನಿಗಳನ್ನು ಹೊಂದಿದ್ದರು’ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ರಾಣಾ ಕಪೂರ್ ಪತ್ನಿ ಮತ್ತು ಪುತ್ರಿಯರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

ವಂಚನೆ ಹೇಗೆ?
ಕಪೂರ್ ಪತ್ನಿ, ಮೂವರು ಹೆಣ್ಣುಮಕ್ಕಳ ಹೆಸರಲ್ಲಿ 20 ಶೆಲ್ ಕಂಪನಿ ತೆರೆದಿದ್ದಾರೆ. ಖಾಸಗಿ ಕಂಪನಿಗಳು ಸಾಲ ಕೊಟ್ಟಿದ್ದಕ್ಕೆ ಪ್ರತಿಯಾಗಿ 2,000 ಕೋಟಿ ರೂ. ಕಿಕ್‍ಬ್ಯಾಕ್ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಡಿಎಚ್‍ಎಫ್‍ಎಲ್‍ಗೆ 3,700 ಕೋಟಿ ರೂಪಾಯಿ ಸಾಲ ನೀಡಿದ್ದು ಡಿಎಚ್‍ಎಫ್‍ಎಲ್‍ನಿಂದ ಕಪೂರ್ ಶೆಲ್ ಕಂಪನಿಗೆ 600 ಕೋಟಿ ರೂ. ಸಂದಾಯವಾಗಿದೆ. ಕಪೂರ್ ಕುಟುಂಬ ಬ್ರಿಟನ್‍ನಲ್ಲಿ 5 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಮುಂಬೈನ ವರ್ಲಿಯಲ್ಲಿರುವ ರಾಣಾ ಕಪೂರ್ ನಿವಾಸದ ಮೇಲೆ ಮೊನ್ನೆಯಷ್ಟೇ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಅವರ ಪತ್ನಿಯನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಶನಿವಾರ ಜಾರಿ ನಿರ್ದೇಶನಾಲಯ ಕಚೇರಿಗೆ ಕರೆಯಿಸಿ ಫುಲ್ ಡ್ರಿಲ್ ಮಾಡಿದ್ದರು. ರಾಣಾ ಕಪೂರ್, ಪತ್ನಿ ಮತ್ತು ಮೂವರು ಪುತ್ರಿಯರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಇಡಿ ತನಿಖೆ ಮುಂದುವರಿಸಿದೆ.

ತಿಂಗಳಿಗೆ 50 ಸಾವಿರ ರೂ. ವಿತ್‍ಡ್ರಾ ಮಿತಿ:
ಈ ಮಧ್ಯೆ ಎಸ್‍ಬಿಐ ಕೈಗೊಂಡಿರುವ ಪುನಶ್ಚೇತನ ಕ್ರಮಗಳಿಂದಾಗಿ ಯೆಸ್ ಬ್ಯಾಂಕ್ ಸ್ವಲ್ಪ ಮಟ್ಟಿಗೆ ಉಸಿರಾಡಲು ಶುರುಮಾಡಿದೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಯೆಸ್ ಬ್ಯಾಂಕ್, ತನ್ನ ಗ್ರಾಹಕರಿಗೆ ಸ್ವಲ್ಪ ರಿಲೀಫ್ ನೀಡಿದೆ. ಯೆಸ್ ಬ್ಯಾಂಕ್‍ನ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಎಟಿಎಂನಲ್ಲಿ ಹಣ ಡ್ರಾ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ತಿಂಗಳಿಗೆ 50 ಸಾವಿರ ರೂ. ವಿತ್‍ಡ್ರಾ ಮಿತಿ ಮುಂದುವರಿಸಲಾಗಿದೆ. ಯೆಸ್ ಬ್ಯಾಂಕ್ ಪುನಶ್ಚೇತನ ಸಂಬಂಧ ಎಸ್‍ಬಿಐ ರೂಪಿಸಿರುವ ಯೋಜನೆಯ ಕರಡು ಪ್ರತಿಯನ್ನು ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

Comments are closed.