
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು ಸುಪ್ರೀಂ ಕೋರ್ಟಿನ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಹಸ್ತಕ್ಷೇಪ ಅರ್ಜಿಯೊಂದನ್ನು ಸಲ್ಲಿಸಲು ಸಿದ್ಧತೆಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶ್ವಸಂಸ್ಥೆಯಲ್ಲಿರುವ ಮಾನವ ಹಕ್ಕುಗಳ ಹೈ ಕಮಿಷನರ್ ಮಿಶೆಲ್ ಬಶೆಲೆಟ್ ಅವರು ಈ ಹಸ್ತಕ್ಷೇಪ ಅರ್ಜಿಯನ್ನು ಸಲ್ಲಿಸುವ ಕುರಿತಾಗಿ ಜೆನೇವಾದಲ್ಲಿರುವ ಭಾರತದ ಪರ್ಮನೆಂಟ್ ಮಿಷನ್ ಗೆ ಮಾಹಿತಿ ನೀಡಲಾಗಿದೆ ಎಂಬ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಆದರೆ, ‘ಸಿಎಎ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದೆ ಹಾಗೂ ದೇಶಕ್ಕೆ ಅಗತ್ಯವಾಗಿರುವ ಕಾನೂನುಗಳನ್ನು ರೂಪಿಸಿಕೊಳ್ಳುವುದು ನಮ್ಮ ಸಂಸತ್ತಿನ ಸರ್ವೋಚ್ಛ ಹಕ್ಕಾಗಿದೆ ಮತ್ತು ಭಾರತದ ಸಾರ್ವಭೌಮತೆಗೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ವಿದೇಶಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸುವುದಿಲ್ಲ ಎಂದು ನಾವು ಬಲವಾಗಿ ನಂಬಿದ್ದೇವೆ’ ಎಂದು ರವೀಶ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಮಿಶೆಲ್ ಬಶೆಲೆಟ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ದೆಹಲಿಯಲ್ಲಿ ಉಂಟಾಗಿದ್ದ ದಂಗೆಯ ಕುರಿತಾಗಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು ಹಾಗೂ ಸರಕಾರ ಮಧ್ಯಪ್ರವೇಶಿಸಿ ಇನ್ನಷ್ಟು ಹಿಂಸಾಚಾರಗಳುಂಟಾಗುವುದನ್ನು ತಡೆಯಬೇಕು ಎಂದು ಅವರು ಭಾರತ ಸರಕಾರವನ್ನು ಒತ್ತಾಯಿಸಿದ್ದರು.
Comments are closed.