ರಾಷ್ಟ್ರೀಯ

ಎಲ್‍ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರಕಾರ

Pinterest LinkedIn Tumblr


ನವದೆಹಲಿ: ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಎಲ್‍ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇಂದು ಅಂದ್ರೆ ಮಾರ್ಚ್ 1ರಂದು ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ 53 ರೂ. ಅಗ್ಗವಾಗಿದೆ.

ಸಬ್ಸಿಡಿ ರಹಿತ ಎಲ್‍ಪಿಜಿ ದರವು ಸದ್ಯ ದೆಹಲಿಯಲ್ಲಿ 805 ರೂ. ಮತ್ತು ಮುಂಬೈನಲ್ಲಿ 776 ರೂ. ಇದೆ. ಕಳೆದ ವರ್ಷ ಆಗಸ್ಟ್ ನಂತರ ಇದೇ ಮೊದಲ ಬಾರಿಗೆ ಎಲ್‍ಪಿಜಿ ಸಿಲಿಂಡರ್ ಬೆಲೆ ಇಳಿಕೆ ಕಂಡಿದೆ. ಮೊದಲ 6 ತಿಂಗಳಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ ಆರು ಪಟ್ಟು ಹೆಚ್ಚಾಗಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಪ್ರಕಾರ, ಹೊಸ ಬೆಲೆಯು ಭಾನುವಾರ ಜಾರಿಗೆ ಬಂದಿದ್ದು, ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್‍ಗಳ ಬೆಲೆ 53 ರೂ. ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಸದ್ಯ 862 ರೂ. ಇದ್ದು, ಬೆಲೆ ಕಡಿಮೆ ಆಗಿರುವುದರಿಂದ 809 ರೂ. ಆಗಲಿದೆ.

ದೆಹಲಿಯಲ್ಲಿ ಈ ಮೊದಲು ಎಲ್‍ಪಿಜಿ ಸಿಲಿಂಡರ್ ಬೆಲೆಯು 858 ರೂ. ಇತ್ತು, ಈಗ 805 ರೂ. ಆಗಿದೆ. ಎಲ್‍ಪಿಜಿ ಸಿಲಿಂಡರ್ ಬೆಲೆ ಮುಂಬೈನಲ್ಲಿ 829 ರೂ.ರಿಂದ 776 ರೂ.ಗೆ ಇಳಿಕೆ ಕಂಡರೆ, ಕೋಲ್ಕತ್ತಾದಲ್ಲಿ 896 ರೂ.ದಿಂದ 839 ರೂ. ಹಾಗೂ ಚೆನ್ನೈನಲ್ಲಿ 881 ರೂ.ದಿಂದ 826 ರೂ.ಗೆ ಬೆಲೆ ಇಳಿಕೆಯಾಗಿದೆ.

ಕೇಂದ್ರದಿಂದ ವಾರ್ಷಿಕ 12 ಸಿಲಿಂಡರ್ ಸಬ್ಸಿಡಿ:
ಪ್ರಸ್ತುತ, ಕೇಂದ್ರ ಸರ್ಕಾರವು ಪ್ರತಿವರ್ಷ 14.2 ಕೆಜಿಯ 12 ಸಿಲಿಂಡರ್‍ಗಳಿಗೆ ಸಹಾಯಧನ ನೀಡುತ್ತದೆ. 12ಕ್ಕೂ ಹೆಚ್ಚು ಸಿಲಿಂಡರ್‍ಗಳನ್ನು ಬಳಸಿದರೆ ಗ್ರಾಹಕರು ಸಂಪೂರ್ಣ ಬೆಲೆ ತೆರಬೇಕಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ಬೆಲೆಗಳ ಆಧಾರದ ಮೇಲೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿರ್ಧರಿಸಲಾಗುತ್ತದೆ. ದೇಶೀಯ ಗ್ರಾಹಕರಿಗೆ ಸಿಲಿಂಡರ್‍ಗೆ ಸುಮಾರು 154 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಫೆಬ್ರವರಿ 13ರಂದು, ಎಲ್‍ಪಿಜಿ ದರ ಏರಿಕೆಯಾಗಿದ್ದನ್ನು ಖಂಡಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್‍ಪಿಜಿ ದರ ಏರಿಕೆ ಖಂಡಿಸಿ ಸ್ಮೃತಿ ಇರಾನಿ ರಸ್ತೆಯಲ್ಲಿ ಸಿಲಿಂಡರ್ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ರಾಹುಲ್ ಗಾಂಧಿ, ಅದೇ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ದರ ಏರಿಕೆಯನ್ನು ಖಂಡಿಸಿದ್ದರು. ಎಲ್‍ಪಿಜಿ ಸಿಲಿಂಡರ್ ಬೆಲೆ 150 ರೂ. ಏರಿಕೆಯಾಗಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರ ನಡೆಸುತ್ತಿರುವ ಈ ಪ್ರತಿಭಟನೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದರು.

2010ರ ಫೋಟೋ: ಜುಲೈ 1, 2010ರ ಸ್ಮೃತಿ ಇರಾನಿ ಪ್ರತಿಭಟನೆ ನಡೆಸಿದ್ದರು. ಅಂದು ಅವರು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದರು. 2010ರ ಜುಲೈ 1ರಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ರಾಹುಲ್ ಸಿನ್ಹಾ ನೇತೃತ್ವದ ಪ್ರತಿಭಟನೆಯಲ್ಲಿ ಸ್ಮೃತಿ ಇರಾನಿ ಭಾಗಿಯಾಗಿದ್ದರು.

Comments are closed.