
ನವದೆಹಲಿ: ಸುಪ್ರೀಂ ಕೋರ್ಟ್‌ನ ಆರು ನ್ಯಾಯಮೂರ್ತಿಗಳಿಗೆ ಸಾಂಕ್ರಾಮಿಕ ರೋಗ ಎಚ್1ಎನ್1 ತಗುಲಿದೆ. ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಬೇಕಿದ್ದ ಪೀಠಗಳಲ್ಲಿ ನ್ಯಾಯಮೂರ್ತಿಗಳೇ ಇಲ್ಲದಿರುವುದು ಕಂಡು ಬಂದಿದೆ. ಅಲ್ಲದೇ ಕೆಲ ಜಡ್ಜ್ಗಳು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಆರು ಜಡ್ಜ್ಗಳಿಗೆ ಎಚ್1ಎನ್1 ಸೋಂಕು ತಗುಲಿರುವುದನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಂಗಳವಾರ ಕೋರ್ಟ್ ರೂಮ್‌ನಲ್ಲಿ ಪ್ರಕಟಿಸಿದ್ದಾರೆ. ಈ ಕುರಿತು ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬೆx ಅವರು ನ್ಯಾಯಮೂರ್ತಿಗಳೊಂದಿಗೆ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ದುಷ್ಯಂತ್ ದವೆ ಜೊತೆ ಕೂಡ ಸಿಜೆಐ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ, ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋರ್ಟ್‌ನ ಕೊಠಡಿಗಳನ್ನು ಸೋಂಕುನಿವಾರಕ ಸಿಂಪಡಿಸಿ, ಸ್ವತ್ಛಗೊಳಿಸಲಾಗಿದೆ. ಎಲ್ಲ ನ್ಯಾಯಮೂರ್ತಿಗಳಿಗೂ ಶಿಷ್ಟಾಚಾರದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬ ಸದಸ್ಯರು ಸೇರಿದಂತೆ ಅವರೊಂದಿಗೆ ಸಂಪರ್ಕ ಹೊಂದಿರುವ ಎಲ್ಲರಿಗೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ನಡುವೆ, ಆರು ನ್ಯಾಯಮೂರ್ತಿಗಳಿಗೆ ಸಾಂಕ್ರಾಮಿಕ ರೋಗ ಹರಿಡಿರುವುದರಿಂದ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮತ್ತಿತರ ಮಹತ್ವದ ಪ್ರಕರಣಗಳ ವಿಚಾರಣೆ ವಿಳಂಬ ಆಗುವ ಸಂಭವ ಇದೆ.
Comments are closed.