ರಾಷ್ಟ್ರೀಯ

ಮಹಿಳೆಯರನ್ನು ಬೆತ್ತಲೆಗೊಳಿಸಿ ಫಿಟ್‌ನೆಸ್ ಪರೀಕ್ಷೆ ನೆಪದಲ್ಲಿ ಪ್ರಶ್ನಾವಳಿ..!

Pinterest LinkedIn Tumblr


ಸೂರತ್‌ (ಗುಜರಾತ್): ಗುಜರಾತ್‌ನ ಸೂರತ್‌ ನಗರ ಪಾಲಿಕೆಯಲ್ಲಿ ಕ್ಲರ್ಕ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಮಹಿಳಾ ಅಭ್ಯರ್ಥಿಗಳನ್ನು ಫಿಟ್‌ನೆಸ್‌ ಪರೀಕ್ಷೆಗೆ ನೆಪದಲ್ಲಿ ಬೆತ್ತಲೆಗೊಳಿಸಿ ಅಸಭ್ಯ ಪ್ರಶ್ನೆಗಳನ್ನು ಕೇಳಿದ ಘಟನೆ ನಡೆದಿದೆ. ವಿವಾದ ದೊಡ್ಡದಾಗುತ್ತಲೇ ಪಾಲಿಕೆ ಆಯುಕ್ತರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ನಗರ ಪಾಲಿಕೆ ನಡೆಸುವ ಆಸ್ಪತ್ರೆಯಲ್ಲಿ ಕ್ಲರ್ಕ್‌ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದ 10 ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ ನೆಪದಲ್ಲಿ ಪಾಲಿಕೆ ಆಸ್ಪತ್ರೆಯ ಸ್ತ್ರೀರೋಗ ತಜ್ಞರ ವಾರ್ಡ್‌ನಲ್ಲಿ ಸಾಮೂಹಿಕವಾಗಿ ಬೆತ್ತಲೆಗೊಳಿಸಲಾಗಿದೆ. ಪರೀಕ್ಷೆ ಸಮಯ ನೀವು ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದೀರಾ? ಮುಂತಾದ ಅಸಭ್ಯ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಲಾಗಿದೆ.

ಫೆಬ್ರವರಿ 20ರಂದು ಪರೀಕ್ಷೆ ನಡೆಸಲಾಗಿದ್ದು, ಅಭ್ಯರ್ಥಿಗಳು ದೂರು ನೀಡಿದ ಬಳಿಕ ಆಯುಕ್ತರು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ತನಿಖೆಗಾಗಿ ತ್ರಿ ಸದಸ್ಯ ಸಮಿತಿಯೊಂದನ್ನು ರಚಿಸಲಾಗಿದ್ದು, 15 ದಿನದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.
ಗುಜರಾತ್‌ನ ಭುಜ್‌ ಜಿಲ್ಲೆಯ ಸ್ವಾಮಿ ನಾರಾಯಣ ಮಂದಿರಕ್ಕೆ ಸೇರಿದ ಹಾಸ್ಟೆಲ್‌ನಲ್ಲಿ 68 ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿದ್ದ ಪ್ರಕರಣದ ಬಿಸಿ ತಣ್ಣಗಾಗುವ ಮೊದಲೇ ಮತ್ತೊಂದು ಇಂಥದ್ದೇ ಘಟನೆ ನಡೆದಿದೆ.

ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಲು ದೈಹಿಕ ಪರೀಕ್ಷೆ ಕಡ್ಡಾಯವಾಗಿದ್ದರೂ, ಅದನ್ನು ನಡೆಸಿದ ವಿಧಾನ ಸರಿಯಿಲ್ಲ ಎಂದು ಆಸ್ಪತ್ರೆಯ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಯುವತಿಯರನ್ನು ಒಬ್ಬೊಬ್ಬರಾಗಿಯೇ ಕರೆದು ಪರೀಕ್ಷೆಗೆ ಒಳಪಡಿಸಬೇಕು. ಆದರೆ, ತಲಾ ಹತ್ತು ಮಂದಿಯಂತೆ ಗುಂಪು ರಚಿಸಿ, ಸಾಮೂಹಿಕವಾಗಿ ಅವರನ್ನು ಬೆತ್ತಲೆಗೊಳಿಸಲಾಗಿದೆ. ಇದು ನಿಯಮಗಳ ಉಲ್ಲಂಘನೆ, ಅಮಾನವೀಯ ಎಂದು ನೌಕರರ ಸಂಘವು ಪಾಲಿಕೆ ಆಯುಕ್ತರಿಗೆ ನೀಡಿದ ದೂರಿನಲ್ಲಿ ಹೇಳಿದೆ.

Comments are closed.