
ಹೊಸದಿಲ್ಲಿ: ವೊಡಾಫೋನ್ ಐಡಿಯಾ ಬಿಕ್ಕಟ್ಟು ನಿವಾರಣೆಗೆ ಇರುವ ಎಲ್ಲ ಆಯ್ಕೆಗಳ ಬಗ್ಗೆಯೂ ಕೇಂದ್ರ ಸರಕಾರ ಗಮನ ಹರಿಸಿದೆ. ಬಾಕಿ ತೀರಿಸಲಾಗದೇ ಒಂದು ವೇಳೆ ವೊಡಾಫೋನ್ ಸ್ಥಗಿತವಾದರೆ 13 ಸಾವಿರಕ್ಕೂ ಅಧಿಕ ನೇರ ಉದ್ಯೋಗಗಳ ನಷ್ಟದ ಜೊತೆಗೆ ದೇಶದ ಆರ್ಥಿಕತೆಗೂ ಹೊಡೆತ ಬೀಳುತ್ತದೆ. ಇದನ್ನು ತಪ್ಪಿಸಲು ಸರಕಾರವು ನಾನಾ ಮಾರ್ಗೋಪಾಯಗಳನ್ನು ಯೋಚಿಸುತ್ತಿದೆ ಎಂದು ಸರಕಾರದ ಅಧಿಕಾರಿಗಳು ಹೇಳಿದ್ದಾರೆ.
ಕೂಡಲೇ ಎಜಿಆರ್ ಪಾವತಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದಾಗಿ ವೊಡಾಫೋನ್ ಐಡಿಯಾ ಸೇರಿದಂತೆ ಟೆಲಿಕಾಂ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಇದರ ಜೊತೆಗೆ ಗೇಲ್, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಸರಕಾರಿ ಸ್ವಾಮ್ಯದ ಕಂಪನಿಗಳೂ ಎಜಿಆರ್ ಒತ್ತಡಕ್ಕೆ ಸಿಲುಕಿವೆ.
”ಈ ಕಂಪನಿಗಳಿಗೆ ನೆರವು ನೀಡುವ ಉದ್ದೇಶವಿದ್ದರೂ, ಎಜಿಆರ್ ವ್ಯಾಖ್ಯಾನವನ್ನು ಬದಲಿಸಲು ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಚಿಂತನೆ ನಡೆಸಿಲ್ಲ. ಒಂದು ಕಡೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ ಟೆಲಿಕಾಂ ಕಂಪನಿಗಳಿಂದ ಬಾಕಿಯನ್ನು ಸರಕಾರ ವಸೂಲಿ ಮಾಡಬೇಕಾಗಿದೆ. ಮತ್ತೊಂದು ಕಡೆ, ಕಂಪನಿಗಳು ಮುಚ್ಚದಂತೆ ತಡೆಯಬೇಕಿದೆ. ಸರಕಾರದ ನಿಲುವು ಸ್ಪಷ್ಟವಾಗಿದೆ. ದೇಶದಲ್ಲಿ ಏಕಸ್ವಾಮ್ಯ ಸೃಷ್ಟಿಯಾಗುವುದನ್ನು ಸರಕಾರ ಬಯಸುವುದಿಲ್ಲ,” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
”ಟೆಲಿಕಾಂ ವಲಯದಲ್ಲಿ ಹಣಕಾಸಿನ ಒತ್ತಡವಿದೆ. ಎಜಿಆರ್ ಶುಲ್ಕ ಪಾವತಿಗೆ ಸಮಯ ವಿಸ್ತರಣೆ ಸೇರಿದಂತೆ ಎಲ್ಲ ಆಯ್ಕೆಗಳನ್ನೂ ಸರಕಾರ ಪರಾಮರ್ಶಿಸುತ್ತಿದೆ,” ಎಂದು ಅವರು ವಿವರಿಸಿದ್ದಾರೆ. ಎಜಿಆರ್ ಬಿಕ್ಕಟ್ಟು ಇತ್ಯರ್ಥ ಸಂಬಂಧ ಕಾನೂನು ಆಯ್ಕೆಗಳನ್ನೂ ಸರಕಾರ ಪರಾಮರ್ಶಿಸುತ್ತಿದೆ.
ಎಜಿಆರ್ ಪಾವತಿಗೆ ಸುಪ್ರೀಂ ಕೋರ್ಟ್ ಮಾ. 17ರ ತನಕ ಸಮಯ ನೀಡಿದೆ. ಇಲ್ಲದೇ ಹೋದರೆ, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.
Comments are closed.