
ಕೋಲ್ಕತಾ: ನವಜಾತ ಮಗುವಿಗೆ ಜನ್ಮನೀಡಿದ ನಂತರ ಮಹಿಳೆ ಸಾವನ್ನಪ್ಪಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಪತಿ ವೈದ್ಯರಿಗೆ ಕಪಾಳಮೋಕ್ಷ ಮಾಡಿದ ಘಟನೆ ಕೋಲ್ಕತಾ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
33 ವರ್ಷದ ಮಹಿಳೆಗೆ ಶಸ್ತ್ರಕ್ರಿಯೆ ನಡೆಸುವ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಬೆಳಗಿನ ಜಾವ 3ಗಂಟೆಗೆ ಕುಟುಂಬದ ಸದಸ್ಯರೊಬ್ಬರಿಗೆ ದೂರವಾಣಿ ಕರೆ ಬಂದಿದ್ದು, ಬಾಣಂತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದರು. ಕೂಡಲೇ ಪತಿ ಮತ್ತು ಇತರರು ಆಸ್ಪತ್ರೆಗೆ ಬಂದಾಗ ಆಕೆ ಸಾವನ್ನಪ್ಪಿದ್ದಳು ಎಂದು ವರದಿ ತಿಳಿಸಿದೆ.
ಕೋಲ್ಕತಾ ಮೆಡಿಕಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಸ್ಪತ್ರೆಯ ಸಿಬ್ಬಂದಿಗಳ ಜತೆ ಪ್ರಸೂತಿ ತಜ್ಞ ಡಾ.ಬಸವ್ ಮುಖರ್ಜಿ ಚರ್ಚೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮೃತ ಮಹಿಳೆಯ ಪತಿ ತಪೇನ್ ಭಟ್ಟಾಚಾರ್ಯ ಏಕಾಏಕಿ ಬಂದು ವೈದ್ಯರಿಗೆ ಕಪಾಳಮೋಕ್ಷ ಮಾಡಿರುವುದಾಗಿ ವರದಿ ವಿವರಿಸಿದೆ.
ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ವಿವರಿಸಲು ಯತ್ನಿಸುತ್ತಿರುವಾಗಲೇ ಮೃತ ಮಹಿಳೆಯ ಕುಟುಂಬಸ್ಥರು ಆಕ್ರೋಶಗೊಂಡು ಗಲಾಟೆ ನಡೆಸಿ ವೈದ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ಸಿಎಂಆರ್ ಐ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.