ರಾಷ್ಟ್ರೀಯ

ಭಾರತೀಯ ಪ್ರಜೆ ಎಂದು ಸಾಬೀತುಪಡಿಸಲು 15 ದಾಖಲೆ ಕೊಟ್ಟರೂ ಆಗಿಲ್ಲ

Pinterest LinkedIn Tumblr


ಗುವಾಹಟಿ: ಅಸ್ಸಾಂನ ಕುಗ್ರಾಮದಲ್ಲಿ ವಾಸಿಸುತ್ತಿರುವ 50ವರ್ಷದ ಮಹಿಳೆ ಇದೀಗ ತನ್ನ ಕುಟುಂಬದ ಹೊಣೆ ನಿರ್ವಹಿಸದ ತೊಂದರೆಗೆ ಸಿಲುಕಿದ್ದಾರೆ. ಅದಕ್ಕೆ ಕಾರಣ ತಾನು ಭಾರತೀಯಳು ಎಂಬುದನ್ನು ಸಾಬೀತುಪಡಿಸಲು ಏಕಾಂಗಿಯಾಗಿ ಕಾನೂನು ಹೋರಾಟ ನಡೆಸಿದರೂ ಕೊನೆಗೂ ಅದು ವಿಫಲವಾಗಿದೆ!

ಅಸ್ಸಾಂನ ವಿದೇಶಿಯರ ಟ್ರಿಬ್ಯೂನಲ್ ಜಬೇದಾ ಬೇಗಂ(50ವರ್ಷ) ಅವರನ್ನು ವಿದೇಶಿ ಎಂದು ಘೋಷಿಸಿದೆ. ಟ್ರಿಬ್ಯೂನಲ್ ತೀರ್ಪು ಪ್ರಶ್ನಿಸಿ ಗುವಾಹಟಿ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವಷ್ಟು ಆರ್ಥಿಕ ಶಕ್ತಿ ಆಕೆ ಬಳಿ ಇಲ್ಲ ಎಂದು ವರದಿ ವಿವರಿಸಿದೆ.

15 ದಾಖಲೆ ಕೊಟ್ಟರೂ ಪೌರತ್ವ ಸಾಬೀತುಪಡಿಸಲು ಆಗಿಲ್ಲ!

ಜಬೇದಾ ಬೇಗಂ ಅಸ್ಸಾಂನ ಬಕ್ಸಾ ಜಿಲ್ಲೆಯ ಕುಗ್ರಾಮದ ನಿವಾಸಿಯಾಗಿದ್ದಾರೆ. ಇದು ಗುವಾಹಟಿಯಿಂದ 100 ಕಿಲೋ ಮೀಟರ್ ದೂರದಲ್ಲಿದೆ. ಇಡೀ ಕುಟುಂಬವನ್ನು ಸಾಕುವ ಹೊಣೆ ಈಕೆಯದ್ದಾಗಿದೆ. ಆಕೆಯ ಪತಿ ರಜಾಕ್ ಅಲಿ ಅನಾರೋಗ್ಯ ಪೀಡಿತರಾಗಿದ್ದು, ಹಾಸಿಗೆ ಹಿಡಿದಿದ್ದಾರೆ. ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದರು. ಒಬ್ಬಾಕೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬಳು ನಾಪತ್ತೆಯಾಗಿದ್ದಾಳೆ. ಮೂರನೇಯ ಅಸ್ಮಿನಿಯಾ 5ನೇ ತರಗತಿ ವಿದ್ಯಾರ್ಥಿನಿ.

ಇದೀಗ ಅಸ್ಮಿನಿಯಾ ಭವಿಷ್ಯದ ಬಗ್ಗೆ ಜಬೇದಾಗೆ ದೊಡ್ಡ ಚಿಂತೆಯಾಗಿದೆಯಂತೆ. ತಾನು ದುಡಿದು ಉಳಿಸಿದ್ದ ಹಣವೆಲ್ಲಾ ಕಾನೂನು ಹೋರಾಟಕ್ಕೆ ವ್ಯಯವಾಗಿದೆ. ನನಗೀಗ ಎಲ್ಲಾ ಭರವಸೆ ಹೊರಟು ಹೋಗಿದೆ ಎಂದು ಅಲವತ್ತುಕೊಂಡಿರುವುದಾಗಿ ವರದಿ ತಿಳಿಸಿದೆ.

2018ರಲ್ಲಿ ಗೋಯಾಬರಿ ಗ್ರಾಮದ ಜಬೇದಾ ವಿದೇಶಿ ಪ್ರಜೆ ಎಂದು ಟ್ರಿಬ್ಯುನಲ್ ತೀರ್ಪು ನೀಡಿತ್ತು. ಈ ಬಗ್ಗೆ ಗುವಾಹಟಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಭೂ ಕಂದಾಯ ರಶೀದಿ, ಬ್ಯಾಂಕ್ ದಾಖಲೆ, ಪ್ಯಾನ್ ಕಾರ್ಡ್ ಪೌರತ್ವ ಸಾಬೀತುಪಡಿಸುವ ದಾಖಲೆಯಲ್ಲ ಎಂದು ತೀರ್ಪು ನೀಡಿದೆ.

ತಾನು ಭಾರತೀಯಳು ಎಂದು ಸಾಬೀತುಪಡಿಸಲು ಜಬೇದಾ ಟ್ರಿಬ್ಯುನಲ್ ಗೆ ವೋಟರ್ ಐಡಿ ಸೇರಿದಂತೆ 15 ದಾಖಲೆಗಳನ್ನು ನೀಡಿದ್ದರು. 1966, 1970, 1971ರ ಆಕೆಯ ತಂದೆ ಜಬೇದ್ ಅಲಿಯ ವೋಟರ್ ಲಿಸ್ಟ್ ಅನ್ನು ನೀಡಿದ್ದರು. ಆದರೆ ಜಬೇದಾ ತಂದೆ ಬಗ್ಗೆ ನೀಡಿದ್ದ ಪುರಾವೆ ಸಮಾಧಾನಕರವಾಗಿಲ್ಲ ಎಂದು ಟ್ರಿಬ್ಯುನಲ್ ತಿಳಿಸಿತ್ತು.

ತಂದೆ, ತಾಯಿಯ ಜನ್ಮ ಪ್ರಮಾಣ ಪತ್ರ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಅಧ್ಯಕ್ಷರ ಸರ್ಟಿಫಿಕೇಟ್ ಅನ್ನು ಜಬೇದಾ ಸಲ್ಲಿಸಿದ್ದರು. ಆದರೆ ಟ್ರಿಬ್ಯುನಲ್ ಕೋರ್ಟ್ ಅದನ್ನು ದಾಖಲೆ ಎಂದು ಸ್ವೀಕರಿಸಲು ನಿರಾಕರಿಸಿತ್ತು.

Comments are closed.