ರಾಷ್ಟ್ರೀಯ

ಸಹೋದರಿ ಪ್ರೀತಿ ಮಾಡಿದ ಕಾರಣಕ್ಕೆ ಗುಪ್ತಾಂಗಕ್ಕೆ ಗುಂಡಿಟ್ಟು ಹತ್ಯೆ

Pinterest LinkedIn Tumblr


ಲಕ್ನೋ: ಸಹೋದರಿ ಪ್ರೀತಿಸುತ್ತಿರುವ ವಿಷಯ ತಿಳಿದ ಸಹೋದರ ಸಂಬಂಧಿ ಆಕೆಯ ಗುಪ್ತಾಂಗಕ್ಕೆ ಗುಂಡು ಹೊಡೆದು ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯ ಸಾರ್ಧಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವತಿ ಪ್ರೀತಿಸುತ್ತಿದ್ದ ವಿಷಯವೇ ಕೊಲೆಗೆ ಕಾರಣ ಎಂದು ತಿಳಿಸಿದ್ದು, ಯುವತಿಯ ಮನೆಯವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

ದ್ವಿತೀಯ ಪಿಯುಸಿ ಓದುತ್ತಿರುವ ಸಹೋದರಿ ಪ್ರೀತಿಸುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡ ಅಣ್ಣ(ಸಹೋದರ ಸಂಬಂಧಿ) ಆಕೆಯ ಗುಪ್ತಾಂಗ ಹಾಗೂ ಎದೆಗೆ ಗುಂಡು ಹೊಡೆದು ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.

ಆರಂಭದಲ್ಲಿ ಕುಟುಂಬದವರು ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಫೋರೆನ್ಸಿಕ್ ತಂಡ ಕೂಡಾ ಆಗಮಿಸಿತ್ತು. ಯುವತಿಯ ಪ್ರಕರಣವಾಗಿದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಘಟನೆ ಬಗ್ಗೆ ಪೊಲೀಸರು ಮನೆಯವರನ್ನು ಪ್ರಶ್ನಿಸಿದಾಗ ದಾರಿತಪ್ಪಿಸುವ ಹೇಳಿಕೆ ನೀಡಿದ್ದರು.

ನಂತರ ಮರಣೋತ್ತರ ಪರೀಕ್ಷೆ ವರದಿ ಬಂದಾಗ ಯುವತಿಯ ಮನೆಯವರು ನೀಡಿದ್ದ ಹೇಳಿಕೆಗೂ ಸಂಬಂಧ ಇಲ್ಲದಿರುವುದು ಪತ್ತೆಯಾಗಿತ್ತು. ಕೊನೆಗೆ ಯುವತಿಯ ಸಹೋದರನನ್ನು ವಿಚಾರಿಸಿದಾಗ ಸತ್ಯ ಬಯಲಾಗಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಡಿ.ಅವಿನಾಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

Comments are closed.