ರಾಷ್ಟ್ರೀಯ

ಜಾಮಿಯಾ ಹಿಂಸಾಚಾರ: ವಿದ್ಯಾರ್ಥಿಗಳಿಗೆ ಪೊಲೀಸರು ಥಳಿಸುವ ಎರಡು ತಿಂಗಳ ಹಳೆಯದಾದ ವಿಡಿಯೋ ಬಿಡುಗಡೆ

Pinterest LinkedIn Tumblr


ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ನಂತರ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ಎರಡು ತಿಂಗಳ ಹಳೆಯದಾದ ವಿಡಿಯೋ ಇದೀಗ ಹೊರಬಂದಿದೆ.

49 ಸೆಕೆಂಡ್ ಗಳಿರುವ ವಿಡಿಯೋವನ್ನು ಜಾಮಿಯಾ ಸಮನ್ವಯ ಸಮಿತಿಯು ಇಂದು ಮುಂಜಾನೆ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದೆ.

ವಿಡಿಯೋದಲ್ಲಿ , ಮುಖಕ್ಕೆ ಬಟ್ಟೆ ಸುತ್ತಿಕೊಂಡು ರೀಡಿಂಗ್ ಹಾಲ್ ಗೆ ಪ್ರವೇಶಿಸಿದ ಪೊಲೀಸರು ವಿದ್ಯಾರ್ಥಗಳಿಗೆ ಲಾಠಿ ಚಾರ್ಜ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.

ಎಂ/ಎ ಎಂ.ಫಿಲ್ ಸೆಕ್ಷನ್ ನ ಮೊದಲನೇ ಮಹಡಿಯ ರೀಡಿಂಗ್ ರೂಂ ನಲ್ಲಿ ಪೊಲೀಸರ ದೌರ್ಜನ್ಯದ ಎಕ್ಸ್ ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿಗಳು, ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ಜಾಮೀಯಾ ಸಮನ್ವಯ ಸಮಿತಿಯು ವಿಡಿಯೋವನ್ನು ಟ್ವೀಟ್ ಮಾಡಿದೆ.

ಡಿಸೆಂಬರ್ 15ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜಾಮಿಯಾ ವಿವಿ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಪೊಲೀಸರ ಘರ್ಷಣೆಯೊಂದಿಗೆ ಕೊನೆಗೊಂಡಿತ್ತು. ಈ ವೇಳೆ ಹಿಂಸಾಚಾರ ಭುಗಿಲೆದ್ದು, ಕೆಲವರು ಗಾಯಗೊಂಡಿದ್ದರು. ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು.

ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸರು ಬಲವಂತವಾಗಿ ಕ್ಯಾಂಪಸ್ ಗೆ ನುಗ್ಗಿದ್ದಾರೆ ಎನ್ನುವ ಆರೋಪ ಸುಳ್ಳು, ಪರಿಸ್ಥಿತಿಯನ್ನು ನಿಭಾಯಿಸಲು ಮಾತ್ರ ಪೊಲೀಸರು ಕ್ಯಾಂಪಸ್ ಪ್ರವೇಶಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.