ರಾಷ್ಟ್ರೀಯ

15 ಲಕ್ಷ ರೂ. ವರೆಗಿನ ಚಿಕಿತ್ಸೆಗಳಿಗೂ ಸರಕಾರದ ನೆರವು

Pinterest LinkedIn Tumblr


ಹೊಸದಿಲ್ಲಿ: ಆರೋಗ್ಯ ರಕ್ಷೆಯ ‘ಆಯುಷ್ಮಾನ್‌ ಭಾರತ್‌’ ವಿಮೆ ಯೋಜನೆಯಲ್ಲಿ ದುಬಾರಿ ಮೊತ್ತದ ಚಿಕಿತ್ಸೆಗಳಿಗೆ ಅವಕಾಶವಿಲ್ಲ. ಇಂಥ ಚಿಕಿತ್ಸೆಯ ಅಗತ್ಯವುಳ್ಳ ಬಡ ರೋಗಿಗಳಿಗೆ ಈಗ ರಾಷ್ಟ್ರೀಯ ಆರೋಗ್ಯ ನಿಧಿ(ಆರ್‌ಎಎನ್‌) ಮೂಲಕ 15 ಲಕ್ಷ ರೂ. ತನಕ ಹಣಕಾಸು ನೆರವು ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಸರಕಾರ ಬಿಡುಗಡೆ ಮಾಡಿದೆ.

ಅಂಗಾಂಗ ಕಸಿ, ಅಸ್ಥಿಮಜ್ಜೆಯ ಕಸಿ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌, ಜಾಯಿಂಟ್‌ಗಳಿಗೆ ಸಂಬಂಧಿಸಿದ ಸರ್ಜರಿಗಳಿಗೆ ಲಕ್ಷಾಂತರ ರೂಪಾಯಿ ಅಗತ್ಯವಿದೆ. ಈ ದುಬಾರಿ ಶಸ್ತ್ರಚಿಕಿತ್ಸೆಗಳ ಅಗತ್ಯವುಳ್ಳ ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗಳು, ಆರ್‌ಎಎನ್‌ನಲ್ಲಿ ಹಣಕಾಸು ನೆರವು ಪಡೆಯಲು ಅರ್ಹರಾಗಿದ್ದಾರೆ.

”ರೋಗಿಗಳಿಗೆ ಸೂಚಿಸಲಾಗಿರುವ ಚಿಕಿತ್ಸೆಯು ಆಯುಷ್ಮಾನ್‌-ಪಿಎಂಜೆಎವೈನ ಪ್ಯಾಕೇಜ್‌ನಲ್ಲಿ ಇಲ್ಲದೇ ಹೋದರೇ, ಆ ಫಲಾನುಭವಿಗಳಿಗೆ ಆರ್‌ಎಎನ್‌ ಯೋಜನೆಯ ಮೂಲಕ 15 ಲಕ್ಷ ರೂ. ತನಕ ಆರ್ಥಿಕ ನೆರವು ನೀಡಬಹುದಾಗಿದೆ,” ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಸ್ಪಷ್ಟ ಪಡಿಸಲಾಗಿದೆ. ಈ ವಿಷಯವನ್ನು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಯಾರಿಗೆ ಲಭ್ಯ?

ದುಬಾರಿ ಚಿಕಿತ್ಸೆ ಅಗತ್ಯವಾಗಿರುವ ರೋಗಿಯು ಆಯುಷ್ಮಾನ್‌ ಯೋಜನೆಯ ಫಲಾನುಭವಿಯಾಗಿರಬೇಕು.
ಬಡತನ ರೇಖೆಗಿಂತ ಕೆಳಗಿರಬೇಕು.
ಜೀವಕ್ಕೆ ಎರವಾಗಬಲ್ಲಕಾಯಿಲೆಯಿಂದ ಬಳಲುತ್ತಿರಬೇಕು.

40 ಕೋಟಿ ರೂ. ಖರ್ಚು
2017-18ರಲ್ಲಿ ರಾಷ್ಟ್ರೀಯ ಆರೋಗ್ಯ ನಿಧಿಯಲ್ಲಿನ 40 ಕೋಟಿ ರೂ.ಗಳನ್ನು ದಿಲ್ಲಿಯ ಏಮ್ಸ್‌ನಲ್ಲಿ 926 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗಿದೆ. ಒಬ್ಬ ರೋಗಿಗೆ ಸರಾಸರಿ 4.31 ಲಕ್ಷ ರೂ. ಬಳಕೆಯಾಗಿದೆ.

ಬಡ ರೋಗಿಯ ಸಾವು
ಆಯುಷ್ಮಾನ್‌ ಭಾರತ್‌ನ ಫಲಾನುಭವಿಗಳಿಗೆ ಆರ್‌ಎಎನ್‌ ನಿಧಿ ಮೂಲಕ ದುಬಾರಿ ಚಿಕಿತ್ಸೆಗಳನ್ನು(15 ಲಕ್ಷ ರೂ.) ಭರಿಸಲು ಆರೋಗ್ಯ ಸಚಿವಾಲಯ ಕಡೆಗೂ ತೀರ್ಮಾನಿಸಿದೆ. ಇದರಿಂದ ನೂರಾರು ಬಡ ರೋಗಿಗಳಿಗೆ ಅನುಕೂಲವಾಗಲಿದೆ. ಅಪ್ಲಾಸ್ಟಿಕ್‌ ಅನೀಮಿಯಾದಿಂದ ಬಳಲುತ್ತಿದ್ದ 17 ವರ್ಷದ ಪಂಕಜ್‌ ಎಂಬ ಬಡ ಯುವಕ ಅಗತ್ಯ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದ. ಈತನ ಹೆಸರು ಆಯುಷ್ಮಾನ್‌ ಯೋಜನೆಯಲ್ಲಿದ್ದು, ಆರ್‌ಎಎನ್‌ನಲ್ಲಿ ನೆರವು ನೀಡಲು ಆಗದು ಎಂದು ಸರಕಾರ ಹೇಳಿತ್ತು. ಇಂಥದ್ದೇ ಪ್ರಕರಣಗಳಲ್ಲಿ ರೋಗಿಗಳ ಜೀವ ಉಳಿಸಲು ಇನ್ಮುಂದೆ ಸಾಧ್ಯವಾಗಲಿದೆ.

Comments are closed.