
ನವದೆಹಲಿ: ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ರನ್ನು ಅವರ ಸಹೋದ್ಯೋಗಿ ಗುಂಡಿಟ್ಟು ಕೊಂದ ಘಟನೆ ವಾಯವ್ಯ ದೆಹಲಿಯ ಮೆಟ್ರೋ ಸ್ಟೇಶನ್ ಬಳಿ ನಡೆದಿದೆ.
ಪ್ರೀತಿ ಅಹ್ಲಾವತ್ (26) ಅವರು ಪೂರ್ವ ದೆಹಲಿಯ ಪಟ್ಪರ್ಗಂಜ್ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಮೆಟ್ರೋ ಸ್ಟೇಶನ್ನಲ್ಲಿ ಇಳಿದು ಮನೆಯ ಕಡೆ ಹಾದಿ ಹಿಡಿದಿದ್ದರು. ಆದರೆ ದುರದೃಷ್ಟವಾತ್ ಅವರ ಸಹೋದ್ಯೋಗಿ ದೀಪಾಂಶು ರಥಿ ಎಂಬುವರ ಕೈಯಿಂದ ಹತ್ಯೆಗೀಡಾಗಿದ್ದಾರೆ.
ಪ್ರೀತಿ ಮೂಲತಃ ಹರಿಯಾಣಾದ ಸೋನಿಪತ್ ಮೂಲದವರಾಗಿದ್ದು ದೆಹಲಿಯ ರೋಹಿಣಿಯಲ್ಲಿ ಬಾಡಿಗೆ ವಸತಿಗೃಹದದಲ್ಲಿ ತಂಗಿದ್ದರು. ಅವರನ್ನು ಹತ್ಯೆ ಮಾಡಿದ ದೀಪಾಂಶು ಕೂಡ ಅಲ್ಲಿಯವರೇ ಎನ್ನಲಾಗಿದೆ. ಪ್ರೀತಿಯವರ ತಲೆಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದ ದೀಪಾಂಶು ಸಾನಿಪತ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರೀತಿ ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲಿನ ಸಿಸಿಟಿವಿ ಫೂಟೇಜ್ಗಳನ್ನೂ ಸಂಗ್ರಹಿಸಿದ್ದಾರೆ.
ಈ ಹತ್ಯೆಗೆ ಪ್ರೀತಿ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ದೀಪಾಂಶು ರಥಿ ಪ್ರೀತಿ ಅಹ್ಲಾವತ್ರನ್ನು ಪ್ರೀತಿಸುತ್ತಿದ್ದ. ಆದರೆ ಪ್ರೀತಿಗೆ ದೀಪಾಂಶು ಮೇಲೆ ಮನಸಿರಲಿಲ್ಲ. ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ತನಿಖೆ ಕೈಗೊಂಡಿದ್ದಾರೆ.
Comments are closed.