ರಾಷ್ಟ್ರೀಯ

ಹೆಂಡತಿ ಮೃತಪಟ್ಟ ಕೆಲವೇ ಕ್ಷಣಗಳಲ್ಲಿ ಮಕ್ಕಳಿಬ್ಬರ ಜೊತೆ ಆತ್ಮಹತ್ಯೆ

Pinterest LinkedIn Tumblr


ಚೆನ್ನೈ: ವ್ಯಕ್ತಿಯೊಬ್ಬ ತನ್ನ ಪತ್ನಿ ಸಾವನ್ನಪ್ಪಿದ್ದ ಕೆಲವೇ ಗಂಟೆಯಲ್ಲಿ ಇಬ್ಬರು ಮಕ್ಕಳ ಜೊತೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯಲ್ಲಿ ನಡೆದಿದೆ.

ರಾಣಿಪೇಟೆ ಜಿಲ್ಲೆಯ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ಶೋಲಿಂಗೂರ್ ಬಳಿಯ ಕೊಡೈಕ್ಕಲ್ ಗ್ರಾಮದ ವೆಂಕಟೇಶನ್ ಎಂದು ಗುರುತಿಸಲಾಗಿದೆ. ಪತ್ನಿ ನಿರ್ಮಲಾ (24) ಆತ್ಮಹತ್ಯೆ ಮಾಡಿಕೊಂಡ ನಂತರ ವೆಂಕಟೇಶನ್ ಸಂಜನಾ ಶ್ರೀ (2) ಮತ್ತು ರಿತಿಕಾ ಶ್ರೀ (1) ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೆಂಕಟೇಶನ್ ಮಧುರೈನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದನು. ಈ ದಂಪತಿ ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದರು. ವೆಂಕಟೇಶನ್ ರಜಾದಿನಗಳಲ್ಲಿ ಮನೆಗೆ ಬಂದು ಪತ್ನಿ, ಮಕ್ಕಳ ಜೊತೆ ಇರುತ್ತಿದ್ದನು. ಮೃತ ನಿರ್ಮಲಾ ತನ್ನ ಅತ್ತೆ-ಮಾವನ ಜೊತೆ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಮಾಲಾ ತನ್ನ ಅತ್ತೆ ಮನೆಯಲ್ಲಿ ಜಗಳ ಮಾಡಿಕೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಆಘಾತಕಾರಿ ವಿಚಾರವನ್ನು ತಿಳಿದು ವೆಂಕಟೇಶನ್ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಸಂಜೆ ಸುಮಾರು 7 ಗಂಟೆಗೆ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾಹಿತಿ ತಿಳಿದು ರೈಲ್ವೆ ಮತ್ತು ರಾಣಿಪೇಟೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments are closed.