ರಾಷ್ಟ್ರೀಯ

ಉಗ್ರರಿಂದ ಗ್ರೆನೇಡ್‌ ದಾಳಿ: ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ

Pinterest LinkedIn Tumblr


ಶ್ರೀನಗರ (ಜಮ್ಮು-ಕಾಶ್ಮೀರ): ನಗರದ ಪ್ರಮುಖ ಸ್ಥಳವಾದ ಲಾಲ್‌ ಚೌಕ್‌ನಲ್ಲಿ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದು, 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ಪ್ರತಾಪ್‌ ಪಾರ್ಕ್‌ನಲ್ಲಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ನೇರವಾಗಿ ಗ್ರೆನೇಡ್‌ ಎಸೆದು ಉಗ್ರರು ಪರಾರಿಯಾಗಿದ್ದಾರೆ. ಸ್ಫೋಟದಿಂದ ಉಂಟಾದ ಭಾರಿ ಸದ್ದಿಗೆ ಕೆಲಕಾಲ ಲಾಲ್‌ ಚೌಕ್‌ ಸುತ್ತಮುತ್ತ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಮೀಪದ ಸಂಡೇ ಮಾರುಕಟ್ಟೆಗೆ ಬಂದಿದ್ದ ಜನರು ಗಾಬರಿಯಿಂದ ಕಂಗೆಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಫೋಟ ಸಂಭವಿಸಿದ ಕೆಲ ನಿಮಿಷಗಳ ಬಳಿಕ ಭದ್ರತಾ ಪಡೆಗಳು ಲಾಲ್‌ ಚೌಕ್ ಸುತ್ತುವರಿದು ಉಗ್ರರು ಮತ್ತು ಅಡಗಿಸಿಟ್ಟ ಸ್ಫೋಟಕಗಳಿಗಾಗಿ ಶೋಧ ಕಾರ್ಯ ನಡೆಸಿವೆ. ಇತ್ತೀಚೆಗೆ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್‌ ಪ್ಲಾಜಾದಲ್ಲಿನ ಪೊಲೀಸ್‌ ತಂಡದ ಮೇಲೆ ಟ್ರಕ್‌ನಲ್ಲಿ ಬಂದ ಉಗ್ರರು ದಾಳಿ ನಡೆಸಿದ್ದರು.

ಎನ್‌ಐಎಯಿಂದ ಹಲವೆಡೆ ಶೋಧ: ಹಿಜ್ಬುಲ್‌ ಉಗ್ರರಿಗೆ ನೆರವು ನೀಡುವ ವೇಳೆ ಬಂಧಿತರಾದ ಜಮ್ಮು ಮತ್ತು ಕಾಶ್ಮೀರ ಡಿಎಸ್‌ಪಿ ದೇವಿಂದರ್‌ ಸಿಂಗ್‌ ಅವರ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಭಾನುವಾರ ದಕ್ಷಿಣ ಕಾಶ್ಮೀರದ ಹಲವೆಡೆ ಶೋಧಕಾರ್ಯ ನಡೆಸಿದ್ದಾರೆ. ಸಿಂಗ್‌ ನಿವಾಸ, ಅವರೊಂದಿಗೆ ಸೆರೆಸಿಕ್ಕ ಉಗ್ರರ ಕುಟುಂಬಸ್ಥರ ನಿವಾಸ, ಕೆಲವು ಖಾಸಗಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಎನ್‌ಐಎ ತಂಡ ಮಹತ್ವದ ದಾಖಲೆಗಳಿಗಾಗಿ ಶೋಧ ನಡೆಸಿದೆ ಎಂದು ತಿಳಿದುಬಂದಿದೆ.

ಜನವರಿ 11 ರಂದು ಪಾಕ್‌ ಪೋಷಿತ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ನವೀದ್‌ ಬಾಬು ಅಲಿಯಾಸ್‌ ಸೈಯದ್‌ ಮುಶ್ತಾಕ್‌ ಅಹ್ಮದ್‌ನನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಡಿಎಸ್‌ಪಿ ಸಿಂಗ್‌ ಬಂಧನವಾಗಿತ್ತು.

Comments are closed.