ರಾಷ್ಟ್ರೀಯ

ತಿಂಗಳ ಹಿಂದೆ ವಿವಾಹವಾಗಿದ್ದ MBA ಪದವೀಧರೆ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಒಂದೂವರೆ ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ನವವಿವಾಹಿತೆ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವನಸ್ಥಾಲಿಪುರಂನಲ್ಲಿ ನಡೆದಿದೆ.

ಪಲ್ಲವಿ ಅಲಿಯಾಸ್ ಪಿಂಕಿ (25) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಶ್ರೀನಿವಾಸ್‍ನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಕಿರುಕುಳದಿಂದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತ ಪಿಂಕಿಯ ಪೋಷಕರು ಆರೋಪಿಸಿದ್ದಾರೆ.

ಏನಿದು ಪ್ರಕರಣ?
ಮಲಕ್ಪೇಟೆ ನಿವಾಸಿ ಪಲ್ಲವಿ ಡಿಸೆಂಬರ್ 8 ರಂದು ವನಸ್ಥಾಲಿಪುರಂನ ಬಿಸಿನೆಸ್ ಮ್ಯಾನ್ ಸಂತೋಷ್ ಜೊತೆ ವಿವಾಹವಾಗಿದ್ದಳು. ಮದುವೆಯ ಸಂದರ್ಭದಲ್ಲಿ ವರನ ಕುಟುಂಬದವರಿಗೆ 2 ಲಕ್ಷ ಹಣ, ಮನೆಯ ವಸ್ತುಗಳು ಮತ್ತು ಆಭರಣವನ್ನು ವರದಕ್ಷಿಣೆಯಾಗಿ ಕೊಡಲಾಗಿತ್ತು. ಆದರೂ ಪಲ್ಲವಿಯ ಅತ್ತೆ ಮನೆಯವರು ಹೆಚ್ಚಾಗಿ ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಇನ್ಸ್ ಪೆಕ್ಟರ್ ವೆಂಕಟಯ್ಯ ತಿಳಿಸಿದ್ದಾರೆ.

ಪಲ್ಲವಿ ಎಂಬಿಎ ಪದವೀಧರೆಯಾಗಿದ್ದಳು. ಪತಿಯ ಮನೆಯವರು ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ತನ್ನ ರೂಮಿನಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಈ ವೇಳೆ ಅತ್ತೆ-ಮಾವ ಆಸ್ಪತ್ರೆಗೆ ಹೋಗಿದ್ದರು. ಇತ್ತ ಪತಿ ಕೆಲಸಕ್ಕೆಂದು ಹೊರಗೆ ಹೋಗಿದ್ದನು ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ವನಸ್ಥಾಲಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಯ ಮನೆಯವರ ಕಿರುಕುಳದಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments are closed.