ರಾಷ್ಟ್ರೀಯ

ಐಬಿಎಂ ಸಿಇಓ ಆಗಿ ಇಂಡಿಯಾ ಮೂಲದ ಅರವಿಂದ ಕೃಷ್ಣ ನೇಮಕ!

Pinterest LinkedIn Tumblr


ನವದೆಹಲಿ: ಅಮೆರಿಕಾ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಐಬಿಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾನ್ಪುರ ಐಐಟಿಯ ಹಳೆಯ ವಿದ್ಯಾರ್ಥಿ ಅರವಿಂದ ಕೃಷ್ಣ ಅವರನ್ನು ನೇಮಕಗೊಳಿಸಲಾಗಿದೆ.

ಐಬಿಎಂ ನಿರ್ದೇಶಕ ಮಂಡಳಿ ಗುರುವಾರದ ಸಭೆಯಲ್ಲಿ 57 ವರ್ಷದ ಅರವಿಂದ ಕೃಷ್ಣ ಅವರನ್ನು 2020ರ ಏಪ್ರಿಲ್ 6 ರಿಂದ ಜಾರಿಗೆ ಬರುವಂತೆ ಮಂಡಳಿಯ ನಿರ್ದೇಶಕರನ್ನಾಗಿಯೂ ಚುನಾಯಿಸಲಾಗಿದೆ. ಐಬಿಎಂನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಮಾಡಿರುವುದು ತಮಗೆ ರೋಮಾಂಚನದ ಜೊತೆಗೆ ಅತ್ಯಂತ ವಿನಮ್ರವನ್ನಾಗಿಸಿದೆ ಎಂದು ಅರವಿಂದ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ವಿಶ್ವಾಸ, ನಂಬಿಕೆ ಇರಿಸಿರುವ ಆಡಳಿತ ಮಂಡಳಿಗೆ ಕೃತಜ್ಞತೆ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಅಲ್ಪಾಬೆಟ್ ಗೆ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್ ಗೆ ಸತ್ಯಾ ನಾದೆಲ್ಲಾ ನಂತರ, ಅಮೆರಿಕಾದ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಮುಖ್ಯಸ್ಥರಾಗಿರುವ ಅರವಿಂದ ಕೃಷ್ಣ ನೇಮಕವಾಗುವ ಮೂಲಕ ಭಾರತೀಯ ಮೂಲದ ಮೂರನೇ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಕ್ಲೌಡ್ ಹಾಗೂ ಕಾಗ್ನಿಟೀವ್ ತಂತ್ರಾಂಶ ವಿಭಾಗದ ಹಿರಿಯ ಉಪಾದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ ಕೃಷ್ಣ ಕಂಪನಿ ರೆಡ್ ಹ್ಯಾಟ್ ಸ್ವಾಧೀನ ಪಡಿಸಿಕೊಳ್ಳುವಲ್ಲಿನ ಪ್ರಮುಖ ರೂವಾರಿಯಾಗಿದ್ದರು. ಐಬಿಎಂನ ಮುಂದಿನ ಯುಗದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಯಾಗಲು ಅರವಿಂದ್ ಸರಿಯಾದ ವ್ಯಕ್ತಿ ಎಂದು ಐಬಿಎಂ ಅಧ್ಯಕ್ಷ ವರ್ಜೀನಿಯಾ ರೊಮೆಟ್ಟಿ ಹೇಳಿದ್ದಾರೆ.

ಅರವಿಂದ ಕೃಷ್ಣ ಅದ್ಬುತ ತಂತ್ರಜ್ಞ, ಕೃತಕ ಬುದ್ಧಿಮತ್ತೆ, ಕ್ಲೌಡ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬ್ಲಾಕ್‌ ಚೈನ್‌ನಂತಹ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಅದ್ಭುತ ಕಾರ್ಯಾಚರಣೆಯ ನಾಯಕರಾಗಿದ್ದು, ಭವಿಷ್ಯದ ವ್ಯವಹಾರ ರೂಪಿಸುವುದರೊಂದಿಗೆ ಇಂದು ಯಶಸ್ಸು ಸಾಧ್ಯವಾಗುತ್ತದೆ ಎಂದು ಐಬಿಎಂ ಹೇಳಿಕೆ ನೀಡಿದೆ. ಕೃಷ್ಣ ಅವರು ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ, ಡಾಕ್ಟರೇಟ್ ಹೊಂದಿದ್ದಾರೆ. ಅವರು 1990ರಲ್ಲಿ ಐಬಿಎಂ ಸೇರ್ಪಡೆಗೊಂಡಿದ್ದರು.

Comments are closed.