ಕೇರಳ: ಚೀನಾದ ವುಹಾನ್ ನಿಂದ ಭಾರತಕ್ಕೆ ಹಿಂದುರುಗಿದ ಕೇರಳ ಮೂಲದ ವಿದ್ಯಾರ್ಥಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಆ ಮೂಲಕ ಭಾರತದಲ್ಲಿ ಪತ್ತೆಯಾದ ಮೊದಲ ಪ್ರಕರಣ ಎನಿಸಿಕೊಂಡಿದೆ.
ವುಹಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕೆಲ ದಿನಗಳ ಹಿಂದೆ ಭಾರತಕ್ಕೆ ಹಿಂದುರುಗಿ ಕೇರಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ರಿಪೋರ್ಟ್ ಬಂದಿದ್ದು ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ವುಹಾನ್ ಪ್ರಾಂತ್ಯದಿಂದ ಭಾರತಕ್ಕೆ ಬಂದ ತ್ರಿಶೂರ್, ತಿರುವನಂತಪುರಂ, ಪತ್ತಣಂತಿಟ್ಟ,ಮಲಪ್ಪುರಂನ ತಲಾ ಒಬ್ಬರನ್ನು ಹಾಗೂ ಎರ್ನಾಕುಲಂ ಜಿಲ್ಲೆಯ ಮೂವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 170ಕ್ಕೆ ಏರಿತ್ತು. ಪ್ರತಿನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಚೀನಾದಾದ್ಯಂತ ಜನರು ಕಂಗಾಲಾಗಿದ್ದು 7700 ಮಂದಿಗೆ ಸೋಂಕು ತಗುಲಿರುವ ಅಧಿಕೃತ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ
Comments are closed.