ರಾಷ್ಟ್ರೀಯ

ಏರ್ ಇಂಡಿಯಾ ಮಾರಾಟ ! ಮಾರ್ಚ್ 17 ಬಿಡ್ ಸಲ್ಲಿಸಲು ಕೊನೆಯ ದಿನ

Pinterest LinkedIn Tumblr

ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮತ್ತೊಂದು ಪ್ರಯತ್ನ ಮಾಡುತ್ತಿದೆ. 2018ರಲ್ಲಿ ಶೇ. 70ರಷ್ಟು ಏರ್ ಇಂಡಿಯಾ ಹಕ್ಕನ್ನು ಮಾರಲು ವಿಫಲ ಯತ್ನ ನಡೆಸಿದ್ದ ಸರ್ಕಾರ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಲು ಹೊರಟಿದೆ. ಏರ್ ಇಂಡಿಯಾದಲ್ಲಿ ತಾನು ಹೊಂದಿರುವ ಎಲ್ಲಾ ಷೇರುಗಳನ್ನೂ ಬಿಟ್ಟುಕೊಡಲು ಸರ್ಕಾರ ನಿರ್ಧರಿಸಿದೆ. ಏರ್ ಇಂಡಿಯಾ ಖರೀದಿಸಲು ಇಚ್ಛಿಸುವವರು ಮಾರ್ಚ್ 17ರಷ್ಟರಲ್ಲಿ ಬಿಡ್ ಸಲ್ಲಿಸಬೇಕೆಂದು ಡೆಡ್​ಲೈನ್ ವಿಧಿಸಿದೆ.

“ಏರ್ ಇಂಡಿಯಾ ಖರೀದಿಸುವವರಿಗೆ ಮ್ಯಾನೇಜ್ಮೆಂಟ್ ಅಧಿಕಾರವನ್ನು ಸಂಪೂರ್ಣ ವರ್ಗಾಯಿಸಲಾಗುವುದು. ವೈಮಾನಿಕ ಸಂಸ್ಥೆಯ ಭಾರತ ಸರ್ಕಾರ ಹೊಂದಿರುವ ನೂರು ಪ್ರತಿಶತದಷ್ಟು ಷೇರು ಬಂಡವಾಳವನ್ನು ಮಾರಲಾಗುವುದು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಶೇ. 100 ಷೇರುಗಳು ಹಾಗೂ ಏರ್ ಇಂಡಿಯಾ SATS ಸಂಸ್ಥೆಯ ಶೇ. 50ರಷ್ಟು ಪಾಲನ್ನೂ ಮಾರಲಾಗುವುದು” ಎಂದು ಸರ್ಕಾರ ಹೇಳಿದೆ.

ಆದರೆ, ಏರ್ ಇಂಡಿಯಾ ಮಾರಾಟಕ್ಕೆ ಸರ್ಕಾರ ಕೆಲ ಷರುತ್ತುಗಳನ್ನ ಹಾಕಿದೆ. ಏರ್ ಇಂಡಿಯಾದ ಮಾಲಕತ್ವ ಮತ್ತು ಆಡಳಿತ ನಿಯಂತ್ರಣವು ಭಾರತೀಯ ಸಂಸ್ಥೆಗೇ ಸೇರಬೇಕಿದೆ ಎಂಬುದು ಪ್ರಮುಖ ಷರುತ್ತು. ವಿದೇಶೀ ಕಂಪನಿಗಳಿಗೆ ಹೆಚ್ಚಿನ ಆದ್ಯತೆ ಇಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ, ಏರ್ ಇಂಡಿಯಾ ಸಂಸ್ಥೆಯ 3.26 ಬಿಲಿಯನ್ ಡಾಲರ್ (ಸುಮಾರು 23 ಸಾವಿರ ಕೋಟಿ ರೂಪಾಯಿ) ಮೊತ್ತದಷ್ಟು ಸಾಲ ಹಾಗೂ ಇತರ ಋಣಭಾರಗಳನ್ನು ಭರಿಸಬೇಕಾಗುತ್ತದೆ.

2018ರಲ್ಲೂ ಕೇಂದ್ರ ಸರ್ಕಾರ ಏರ್ ಇಂಡಿಯಾ ಸಂಸ್ಥೆಯನ್ನು ಮಾರಲು ಯತ್ನಿಸಿತ್ತು. ಏರ್ ಇಂಡಿಯಾದ ಶೇ. 76ರಷ್ಟು ಪಾಲು ವರ್ಗಾಯಿಸುವ ಆಫರ್ ಮುಂದಿಟ್ಟಿತ್ತು. ಆದರೆ, 5.1 ಬಿಲಿಯನ್ ಡಾಲರ್ (ಸುಮಾರು 36 ಸಾವಿರ ಕೋಟಿ ರೂಪಾಯಿ) ಮೊತ್ತದಷ್ಟು ಸಾಲವನ್ನೂ ಭರಿಸಬೇಕೆಂದು ಕಂಡಿಷನ್ ಹಾಕಿತ್ತು. ಆದರೆ, ಅಷ್ಟೊ ದೊಡ್ಡ ಮೊತ್ತದ ಸಾಲವನ್ನು ಭರಿಸಲು ಸಾಧ್ಯವಾಗದೇ ಯಾರೂ ಕೂಡ ಖರೀದಿಸಲು ಮುಂದೆ ಬಂದಿರಲಿಲ್ಲ. ಈ ಬಾರಿ ಸರ್ಕಾರದ ಪ್ರಯತ್ನ ಫಲಕೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments are closed.