ಲಕ್ನೋ: ಪ್ರೀತಿ ಯಾರ ಮೇಲೆ ಹೇಗೆ ಬೇಕಾದರೂ ಆಗಬಹುದು. ಆದರೆ ಹೀಗೂ ಪ್ರೀತಿ ಆಗುತ್ತಾ ಎಂದು ಕೇಳಿದರೆ ನಿಮಗೆ ಶಾಕ್ ಆಗಬಹುದು. 7 ಮಕ್ಕಳ ತಾಯಿಗೆ 22 ವರ್ಷದ ಯುವಕನ ಮೇಲೆ ಪ್ರೀತಿಯಾಗಿದೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಮನೆಯಲ್ಲಿ ಹೈಡ್ರಾಮಾ ನಡೆದಿದ್ದು ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
22 ವರ್ಷದ ಯುವಕ 7 ಮಕ್ಕಳು ಹಾಗೂ 7 ಮೊಮ್ಮಕ್ಕಳು ಇರುವ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಮಹಿಳೆಯ ಪತಿ ಹಾಗೂ ಆಕೆಯ ಮಗ ಉತ್ತರ ಪ್ರದೇಶದ ಆಗ್ರಾದ ಪೊಲೀಸ್ ಠಾಣೆಗೆ ಬಂದು ಯುವಕನ ವಿರುದ್ಧ ಪ್ರಕರಣ ದಾಖಲಾದಾಗ ಪ್ರೀತಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸ್ ಠಾಣೆಗೆ ಯುವಕ ತನ್ನ ಕುಟುಂಬಸ್ಥರೊಂದಿಗೆ ಬಂದಿದ್ದನು. ಈ ವೇಳೆ ಯುವಕನ ಕುಟುಂಬಸ್ಥರಿಗೂ ಹಾಗೂ ಮಹಿಳೆಯ ಕುಟುಂಬಸ್ಥರಿಗೂ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಮಹಿಳೆ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಷ್ಟಪಟ್ಟಿದ್ದಾರೆ.
ಪೊಲೀಸರು ಯುವಕನಿಗೆ, ಈ ಪ್ರೀತಿಯನ್ನು ಯಾರು ಒಪ್ಪುವುದಿಲ್ಲ. ನಿನ್ನ ನಿರ್ಧಾರವನ್ನು ಬದಲಿಸಿಕೋ ಎಂದು ಹೇಳಿ ಇಬ್ಬರಿಗೆ ಪ್ರೀತಿಯನ್ನು ಮುಂದುವರಿಸಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಮಹಿಳೆ ಹಾಗೂ ಯುವಕ ಪೊಲೀಸರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿ ನಾವಿಬ್ಬರು ಮದುವೆ ಆಗುತ್ತೇವೆ ಎಂದು ಹಠ ಹಿಡಿದಿದ್ದಾರೆ.
ಮಹಿಳೆ ಹಾಗೂ ಯುವಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಯುವಕನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಮಹಿಳೆ ಯುವಕನನ್ನು ಜಾಮೀನಿನ ಮೂಲಕ ಪೊಲೀಸ್ ಠಾಣೆಯಿಂದ ಹೊರ ಕರೆದುಕೊಂಡು ಬಂದಿದ್ದಾರೆ. ಪ್ರೇಮಿಗಳ ಈ ನಡೆಯನ್ನು ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಇಷ್ಟೆಲ್ಲ ಪ್ರಸಂಗ ನಡೆದು ಮುಂದೆ ಏನಾಯ್ತು ಎನ್ನುವುದರ ಬಗ್ಗೆ ವರದಿ ಪ್ರಕಟವಾಗಿಲ್ಲ.
Comments are closed.