ರಾಷ್ಟ್ರೀಯ

ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ಗೆ ಸಿದ್ಧತೆ?

Pinterest LinkedIn Tumblr


ನವದೆಹಲಿ: ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಬೇಕು ಎಂಬ ಚುನಾವಣಾ ಆಯೋಗದ ಹಳೆಯ ಬೇಡಿಕೆಗೆ ಕೇಂದ್ರ ಕಾನೂನು ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಅದಕ್ಕಾಗಿ ಕೆಲವೊಂದು ರಕ್ಷಣಾತ್ಮಕ ನಿಯಮಗಳನ್ನು ಪಾಲನೆ ಮಾಡುವುದು ಅಗತ್ಯವಾಗಿದೆ ಎಂದು ಸೂಚನೆ ನೀಡಿದೆ.

ಆಧಾರ್‌ ಡೇಟಾವನ್ನು ಕದಿಯುವುದು, ಮಾಹಿತಿ ಛೇದನ ನಡೆಯದಂತೆ ಇರುವ ರಕ್ಷಣಾತ್ಮಕ ನಿಯಮಗಳು ಇರಬೇಕಾದದ್ದು ಅಗತ್ಯವೆಂದು ಕಾನೂನು ಸಚಿವಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಕಾನೂನು ಸಚಿವಾಲಯ ಸೂಚಿಸಿದಂತೆ ಆಧಾರ್‌ ಲಿಂಕ್‌ಗೆ ಸಂಬಂಧಿಸಿದಂತೆ ಇರುವ ಎಲ್ಲಾ ರೀತಿಯ ರಕ್ಷಣಾತ್ಮಕ ನಿಯಮಗಳ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಕೆ ಮಾಡಿದೆ. ಇದರ ಜತೆಗೆ ಮತದಾರರ ಪಟ್ಟಿಯ ವಿವರಗಳು, ಆಧಾರ್‌ ಹೊಂದಿರುವಾತನ ವಿವರಗಳು ಸಮ್ಮಿಳನಗೊಳ್ಳುವುದಿಲ್ಲ ಎಂದೂ ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೆ ವಿವರಣೆ ನೀಡಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಕಾನೂನು ಕಾರ್ಯದರ್ಶಿಗೆ ಚುನಾವಣಾ ಆಯೋಗ ಬರೆದಿದ್ದ ಪತ್ರದ ಪ್ರಕಾರ ಜನತಾ ಪ್ರಾತಿನಿಧ್ಯ ಕಾಯ್ದೆ 1950ಕ್ಕೆ ಮತ್ತು ಆಧಾರ್‌ ಕಾಯ್ದೆ 2016ಕ್ಕೆ ತಿದ್ದುಪಡಿ ತರಬೇಕು. ಈ ಮೂಲಕ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ಮುದ್ರಿತಗೊಂಡಿದ್ದರೆ ಅದನ್ನು ತೆಗೆದು ಹಾಕಲು, ಮತ್ತು ಪರಿಶುದ್ಧವಾದ ಪಟ್ಟಿ ತಯಾರಿಕೆಗೆ ಈ ಬದಲಾವಣೆ ಅಗತ್ಯ ಎಂದು ಪ್ರಸ್ತಾವನೆ ಮಂಡಿಸಿತ್ತು.

ಎಚ್‌.ಎಸ್‌.ಬ್ರಹ್ಮ ಮಖ್ಯ ಚುನಾವಣಾ ಆಯುಕ್ತರಾಗಿದ್ದಾಗ 2015ರ ಫೆಬ್ರವರಿಯಲ್ಲಿ ಇದೇ ವಿಚಾರವನ್ನು ಮಂಡಿಸಿದ್ದರು ಮತ್ತು ಆ ಕೆಲಸ ಶುರು ಮಾಡಿದ್ದರು. ಆಗಸ್ಟ್‌ನಲ್ಲಿ ಆಧಾರ್‌ ವಿವರಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಅಡುಗೆ ಅನಿಲ ಸಂಪರ್ಕ, ಸೀಮೆ ಎಣ್ಣೆ ವಿತರಣೆಗೆ ಮಾತ್ರ ಬಳಕೆ ಮಾಡಬೇಕು ಎಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿತ್ತು.

Comments are closed.