
ಹೊಸದಿಲ್ಲಿ: ತುಂಬಾ ಅಪರೂಪದ ಕಾಯಿಲೆಗಳಿಗೆ ತುತ್ತಾಗುವ ನಾಗರಿಕರಿಗೆ ‘ರಾಷ್ಟ್ರೀಯ ಆರೋಗ್ಯ ನಿಧಿ’ ಅಡಿಯಲ್ಲಿ 15 ಲಕ್ಷ ರೂ.ಗಳವರೆಗಿನ ‘ಒಂದು ಬಾರಿಯ ಚಿಕಿತ್ಸಾ ವೆಚ್ಚ’ವನ್ನು ಕೇಂದ್ರ ಸರಕಾರವೇ ಭರಿಸುವ ಮಹತ್ವದ ಪ್ರಸ್ತಾವನೆಯೊಂದನ್ನು ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ‘ಅಪರೂಪದ ಕಾಯಿಲೆಗಳ ರಾಷ್ಟ್ರೀಯ ನೀತಿ’ಯ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ದೀರ್ಘಕಾಲದ ಬೇಡಿಕೆಯಾದ ‘ಅಪರೂಪದ ಕಾಯಿಲೆಗಳ ಚಿಕಿತ್ಸಾ ನಿಯಮ’ಗಳನ್ನು ರೂಪಿಸುವತ್ತ ಕೇಂದ್ರ ಸರಕಾರ ಹೆಜ್ಜೆಯಿಟ್ಟಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕರಡು ಪ್ರತಿಯನ್ನು ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ನಾಗರಿಕರು ಫೆ.10ರೊಳಗೆ ಸಲಹೆ, ಸೂಚನೆಗಳನ್ನು ಸಲ್ಲಿಸಲು ಅವಕಾಶವಿದೆ.
ಈ ನೀತಿಯಡಿ, ಸಾಮಾನ್ಯ ಆಸ್ಪತ್ರೆಗಳಲ್ಲಿ ಗುಣವಾಗದ ತೀರಾ ಅಪರೂಪದ ಕಾಯಿಲೆಗಳಿಗೆ ದಿಲ್ಲಿಯ ಏಮ್ಸ್, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಂಥ ಉನ್ನತದರ್ಜೆಯ ಆಸ್ಪತ್ರೆಗಳಲ್ಲಿ ನಾಗರಿಕರು ಚಿಕಿತ್ಸೆ ಪಡೆಯಬಹುದು.
ಇದಲ್ಲದೆ, ಈ ಯೋಜನೆಯನ್ನು ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಸೀಮಿತಗೊಳಿಸದೆ, ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ದೇಶದ ಶೇ. 40ರಷ್ಟು ಜನರಿಗೆ ಇದು ಲಭ್ಯವಾಗುವಂತೆ ನೋಡಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ.
Comments are closed.