ರಾಷ್ಟ್ರೀಯ

ಸಿಎಎ ವಿರೋಧಿಸಿ, ಕೈಜೋಡಿಸಲು 11 ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಪಿಣರಾಯಿ ವಿಜಯನ್

Pinterest LinkedIn Tumblr


ತಿರುವನಂತಪುರ (ಜನವರಿ 03); ಪೌರತ್ವ ತಿದ್ದುಪಡಿ ಕಾಯ್ದೆ ತಮ್ಮ ರಾಜ್ಯದಲ್ಲಿ ಜಾರಿಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು (ಶುಕ್ರವಾರ) ದೇಶದ ಬಿಜೆಪಿಯೇತರ 11 ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಬರೆಯಲಾಗಿರುವ ಪತ್ರದಲ್ಲಿ ಪಿಣರಾಯಿ ವಿಜಯನ್, “ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್ಪಿಆರ್) ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಡೆಹಿಡಿಯುವ ಮೂಲಕ ಜನರಲ್ಲಿ ಮೂಡಿರುವ ಆತಂಕವನ್ನು ದೂರ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

“ಪೌರತ್ವ ತಿದ್ದುಪಡಿ ಕಾಯ್ದೆ 2019” ಸಮಾಜದಲ್ಲಿನ ಹಲವು ವರ್ಗಗಳ ನಡುವೆ ತಾರತಮ್ಯಕ್ಕೆ ಕಾರಣವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯ ಮೌಲ್ಯಗಳನ್ನು ರಕ್ಷಿಸಲು ಎಲ್ಲಾ ಭಾರತೀಯರು ಏಕತೆಯನ್ನು ಪ್ರದರ್ಶಿಸುವ ಅವಶ್ಯಕತೆ ಇದೆ” ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ “ಸಿಎಎ” ಅನ್ನು ಈಗಾಗಲೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. ಆದರೆ, ಈ ಕಾಯ್ದೆಯ ವಿರುದ್ಧ ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಹೋರಾಟ ನಡೆಯುತ್ತಲೇ ಇದೆ.

ಕಳೆದ ಡಿಸೆಂಬರ್ 31 ರಂದು ಕೇರಳದ ವಿಧಾನಸಭೆಯಲ್ಲಿ ವಿಷಯ ಮಂಡಿಸಿರುವ ಅಲ್ಲಿನ ಸರ್ಕಾರ “ತಮ್ಮ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಯಾಗುವುದಿಲ್ಲ. ಇದನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು” ಎಂಬ ನಿರ್ಣಯವನ್ನು ತೆಗೆದುಕೊಂಡಿದೆ.

ಕೇರಳದ ಬಿಜೆಪಿ ಪಕ್ಷದ ಏಕೈಕ ಶಾಸಕನ ಹೊರತಾಗಿ ಉಳಿದೆಲ್ಲಾ ಪಕ್ಷದ ಶಾಸಕರು ಕೇರಳ ಸರ್ಕಾರ ನಿರ್ಧಾರಕ್ಕೆ ಒಮ್ಮತ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಎ ರದ್ದುಪಡಿಸಬೇಕು ಎಂಬ ಸಮಾನ ಅಭಿಪ್ರಾಯ ಹೊಂದಿರುವ ರಾಜ್ಯಗಳು ಸಹ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಪರಿಗಣಿಸಿ ಪಿಣರಾಯಿ ವಿಜಯನ್ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಇಂದು ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.

ಜಾರ್ಖಂಡ್​ನ ಹೇಮಂತ್ ಸೊರೆನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಬಿಹಾರದ ನಿತೀಶ್ ಕುಮಾರ್, ಆಂಧ್ರಪ್ರದೇಶದ ಜಗನ್ಮೋಹನ್ ರೆಡ್ಡಿ, ಪುದುಚೇರಿಯ ವಿ. ನಾರಾಯಣಸಾಮಿ, ಮಧ್ಯಪ್ರದೇಶದ ಕಮಲ್ ನಾಥ್ ಅವರಿಗೆ ಪತ್ರ ಬರೆಯಲಾಗಿದೆ.ಕೇರಳ ಸರ್ಕಾರ ವಿಧಾನಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ಸ್ವಾಗತಿಸಿದ್ದಾರೆ. ಅಲ್ಲದೆ, ಬಿಜೆಪಿಯೇತರ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸಿಎಎ ತಮ್ಮ ರಾಜ್ಯದಲ್ಲಿ ಜಾರಿಯಾಗದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.