ರಾಷ್ಟ್ರೀಯ

ಛೋಟಾ ರಾಜನ್ ಹತ್ಯೆಗೆ ಛೋಟಾ ಶಕೀಲ್ ಹೊಸ ಸಂಚು

Pinterest LinkedIn Tumblr


ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ತನ್ನ ಪರಮ ಶತ್ರು ಛೋಟಾ ರಾಜನ್ ನನ್ನು ಹತ್ಯೆ ಮಾಡಲು ಹೊಸ ಸಂಚು ರೂಪಿಸಿದ್ದು, ತಿಹಾರ್ ಜೈಲಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಕರಾಚಿಯಲ್ಲಿ ತಲೆಮರೆಸಿಕೊಂಡಿರುವ ಛೋಟಾ ಶಕೀಲ್ ಅಲ್ಲಿಂದಲೇ ಸದ್ಯ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ನನ್ನು ಜೈಲಿನಲ್ಲಿಯೇ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ದಾವೂದ್ ಬಂಟನ ಹೊಸ ಸಂಚಿನ ಬಗ್ಗೆ ಪ್ರತಿಕ್ರಿಯಿಸಿದ ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೋಯಲ್ ಅವರು, ಛೋಟಾ ರಾಜನ್ ಇರುವ ಜೈಲಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾನು ಭದ್ರತೆ ಬಗ್ಗೆ ಮಾತ್ರ ಮಾತನಾಡಬಲ್ಲೆ. ಅತ್ಯಂತ ಭದ್ರತೆ ಇರುವ ಸೆಲ್ ನಲ್ಲೇ ರಾಜನ್ ನನ್ನು ಇರಿಸಲಾಗಿದೆ. ಭದ್ರತೆಗೆ ಸಂಬಂಧಿಸದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ರಾಜನ್ ಗೆ ಬೆದರಿಕೆ ಇರುವ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ.

ಮೂಲಗಳ ಪ್ರಕಾರ, ಛೋಟಾ ರಾಜನನ್ನು ಅತ್ಯಂತ ಭದ್ರತೆ ಇರುವ ಜೈಲ್ ನಂಬರ್ 2ರಲ್ಲಿಡಲಾಗಿದ್ದು, ತಮಿಳುನಾಡು ವಿಶೇಷ ಪೊಲೀಸರು ವಿಶೇಷ ಭದ್ರತೆ ನೀಡುತ್ತಿದ್ದಾರೆ. ರಾಜನ್ ಗೆ ಕೊಲೆ ಬೆದರಿಕೆ ಬಂದ ನಂತರ ಆತನಿಗೆ ಊಟ ನೀಡುತ್ತಿದ್ದ ಮೂವರು ಅಡಿಗೆಯವರನ್ನು ಬದಲಾಯಿಸಲಾಗಿದೆ. ಅಲ್ಲದೆ ಆತನ ಅಡಿಗೆಗೆ ನೀಡಲಾಗುತ್ತಿದ್ದ ಎಣ್ಣೆ ಸೇರಿದಂತೆ ಪ್ರತಿಯೊಂದು ಆಹಾರಧಾನ್ಯ ಹಾಗೂ ತರಕಾರಿಗಳನ್ನು ಪರಿಶೀಲಿಸಲಾಗುತ್ತಿದೆ.

Comments are closed.