ರಾಷ್ಟ್ರೀಯ

ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಹಲ್ಲೆ ಖಂಡಿಸಿ ಪ್ರಿಯಾಂಕಾ ಗಾಂಧಿ ಧರಣಿ

Pinterest LinkedIn Tumblr


ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಉತ್ತರ ಪ್ರದೇಶ ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಸೋಮವಾರ ಸಾಂಕೇತಿಕ ಧರಣಿ ನಡೆಸಿದರು.

ಪ್ರಿಯಾಂಕಾ ಗಾಂಧಿ ಅವರು ಇಂಡಿಯಾ ಗೇಟ್ ಬಳಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಇಂದು ಸಂಜೆ 4 ಗಂಟೆ ಯಿಂದ 6 ಗಂಟೆಯವರೆಗೆ ಪೊಲೀಸರ ಕ್ರಮದ ವಿರುದ್ಧ ಧರಣಿ ನಡೆಸಿದರು.

ಸರ್ಕಾರ ಸಂವಿಧಾನ ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ ಬಳಿಕ ಅವರು ದಾಳಿ ನಡೆಸಿದ್ದಾರೆ. ನಾವು ಸಂವಿಧಾನಕ್ಕಾಗಿ ಹೋರಾಡುತ್ತೇವೆ. ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ವಿದ್ಯಾರ್ಥಿಗಳ ಒಗ್ಗಟ್ಟು, ಐಕ್ಯತೆಯ ಪ್ರತಿರೂಪವಾಗಿ ನಾವು ಈ ಪ್ರತಿಭಟನೆ ಆರಂಭಿಸಿದ್ದೇವೆ ಎಂದು ಕಾಂಗ್ರೆಸ್​ ವಕ್ತಾರ ರಂದೀಪ್​ ಸುರ್ಜೇವಾಲ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಿನ್ನೆ ದೆಹಲಿಯಲ್ಲಿ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ ಕ್ಯಾಂಪಸ್‌ ಒಳಗೆ ನುಗ್ಗಿ ದಾಂಧಲೆ ಮಾಡಿರುವ ವೀಡಿಯೋ ವೈರಲ್ ಆಗಿದೆ. ಪೊಲೀಸರ ಕ್ರಮಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುಂಡಿನ ದಾಳಿಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

Comments are closed.