ರಾಷ್ಟ್ರೀಯ

‘ರೇಪ್ ಇನ್ ಇಂಡಿಯಾ’ ಹೇಳಿಕೆ ಕ್ಷಮೆಯಾಚಿಸುವುದಿಲ್ಲ, ಬಿಜೆಪಿ ವಿಷಯವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ: ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ಜಾರ್ಖಂಡ್​​ ಚುನಾವಣಾ ಪ್ರಚಾರದ ವೇಳೆ ದೇಶ ‘ಮೇಕ್​ ಇನ್​ ಇಂಡಿಯಾ’ ಬದಲಿಗೆ ‘ರೇಪ್​ ಇನ್​ ಇಂಡಿಯಾ’ ಆಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ ರಾಹುಲ್​ ಗಾಂಧಿ ಈ ಕುರಿತು ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ನಾಯಕರು ಪಟ್ಟು ಹಿಡಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಹುಲ್​ ಭಾರತೀಯ ಮಹಿಳೆಯರಿಗೆ ಅವಮಾನಿಸಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಈ ಕುರಿತು ಅವರು ತಕ್ಷಣಕ್ಕೆ ಕ್ಷಮೆಯಾಚಿಸಬೇಕು ಎಂದು ಸಂಸತ್​ನಲ್ಲಿ ಸ್ಮೃತಿ ಇರಾನಿ ಸೇರಿದಂತೆ ಅನೇಕರು ಪಟ್ಟು ಹಿಡಿದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಕೋಲಾಹಲ ಉಂಟಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ದೆಹಲಿಯನ್ನು ಅತ್ಯಾಚಾರದ ರಾಜಧಾನಿ ಎಂದು ಹೇಳಿದ್ದ ದಾಖಲೆ ನನ್ನ ಮೊಬೈಲ್ ನಲ್ಲಿದೆ. ಶೀಘ್ರದಲ್ಲೇ ಅದನ್ನು ಟ್ವೀಟ್ ಮಾಡಿ ಜನರಿಗೆ ತಿಳಿಸುತ್ತೇನೆ. ಅವರ ಹೇಳಿಕೆಯನ್ನು ನಾನು ಹೇಳಿದ್ದೇನೆಯಷ್ಟೇ.. ಹೀಗಾಗಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಅಂತೆಯೇ ಬಿಜೆಪಿ ಸಂಸದರ ಪ್ರತಿಭಟನೆ ಕುರಿತು ಮಾತನಾಡಿದ ರಾಹುಲ್ ಗಾಂಧಿ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ. ಈ ವಿಚಾರವನ್ನು ದೇಶದ ಜನರಿಂದ ಮರೆಮಾಚಲು ಬಿಜೆಪಿ ನಾಯಕರು ಇಂತಹ ಕ್ಷುಲ್ಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ. ಅವರ ಈ ನಾಟಕವನ್ನು ಜನ ಅರಿತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್​ನಲ್ಲಿ ಗದ್ದಲವೆಬ್ಬಿಸಿದ ಈ ತಮ್ಮ ಹೇಳಿಕೆ ವಿರುದ್ಧ ಯಾವುದೇ ಕಾರಣಕ್ಕೂ ನಾನು ಕ್ಷಮೆಯಾಚಿಸುವುದಿಲ್ಲ. ನಾನು ಏನು ಹೇಳಿದೆ ಎಂಬ ಬಗ್ಗೆ ನಾನು ಸ್ಪಷ್ಟಪಡಿಸುತ್ತೇನೆ. ಪ್ರಧಾನಿ ಸದಾ ಮೇಕ್​ ಇನ್​ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಪ್ರತಿದಿನ ನ್ಯೂಸ್​ ಪೇಪರ್​ ಈ ಕುರಿತು ವಿಷಯ ಇರುತ್ತದೆ ಎಂದು ನಿರೀಕ್ಷಿಸುತ್ತೇನೆ. ಆದರೆ, ಪತ್ರಿಕೆ ತೆಗೆದಾಗ ಏನು ಇರುತ್ತದೆ. ಅದರಲ್ಲಿ ಹಲವು ಅತ್ಯಾಚಾರ ಪ್ರಕರಣಗಳ ವರದಿ ಇರುತ್ತದೆ ಎಂದರು.

ಅಲ್ಲದೇ, ಸದ್ಯ ಎಲ್ಲೆಡೆ ಪೌರತ್ವ ಮಸೂದೆ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಈ ವಿಷಯವನ್ನು ದೊಡ್ಡದು ಮಾಡುತ್ತಿದೆ. ತಾವು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ಕನ್ನಿಮೋಳಿ ಕೂಡ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕುರಿತು ಧ್ವನಿ ಎತ್ತಿದ್ದು, ರಾಹುಲ್​ ಹೇಳಿಕೆ ಸಮರ್ಥಿಸಿಕೊಂಡರು. ನಾವು ಪ್ರಧಾನಿಯವರ ಕಾರ್ಯವನ್ನು ಮೆಚ್ಚುತ್ತೇವೆ. ನಮಗೆ ಆರ್ಥಿಕ ಅಭಿವೃದ್ಧಿಯಾಗುತ್ತೇವೆ. ಆದರೆ, ದೇಶದಲ್ಲಿ ಏನಾಗುತ್ತಿದೆ? ಇದನ್ನೇ ರಾಹುಲ್​ ಗಾಂಧಿ ಹೇಳಿದ್ದಾರೆ. ದುರದೃಷ್ಟವಶಾತ್​ ಮೇಕ್​ ಇನ್​ ಇಂಡಿಯಾ ಆಗುತ್ತಿಲ್ಲ. ದೇಶದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಅದು ಅವರ ಕಾಳಜಿ ಎಂದರು.

Comments are closed.