ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಮಸೂದೆ; ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಯ್ದೆ ಜಾರಿಯಾಗಲು ಬಿಡುವುದಿಲ್ಲ ಎಂದ ಪಶ್ಚಿಮ ಬಂಗಾಳ

Pinterest LinkedIn Tumblr

ಕೋಲ್ಕತಾ: ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಕೇರಳ ಮತ್ತು ಪಂಜಾಬ್ ಸರ್ಕಾರಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ತನ್ನ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಯ್ದೆ ಜಾರಿಯಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದೆ.

ನಿನ್ನೆಯಷ್ಟೇ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕೇಂದ್ರ ಸರ್ಕಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಾವು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದ್ದರು.

ಪೌರತ್ವ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತದೆಯಾದರೂ ಶಾಸನವನ್ನು ಜಾರಿಗೊಳಿಸುವುದಕ್ಕೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುವಂತಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಸೂದೆ ಭಾರತದ ಜಾತ್ಯಾತೀತತೆಗೆ ಧಕ್ಕೆ ಉಂಟುಮಾಡುತ್ತದೆ ಆದ್ದರಿಂದ ಇದನ್ನು ರಾಜ್ಯದಲ್ಲಿ ಅನುಮೋದಿಸುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿಗಳು ಹೇಳಿದ್ದರು. ಇದೀಗ ಈ ಪಟ್ಟಿಗೆ ಪಶ್ಚಿಮ ಬಂಗಾಳ ಕೂಡ ಸೇರ್ಪಡೆಯಾಗಿದ್ದು, ತಾವು ಯಾವುದೇ ಕಾರಣಕ್ಕೂ ತಮ್ಮ ರಾಜ್ಯದಲ್ಲಿ ಸಿಎಬಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇನ್ನು ಈ ಕುರಿತಂತೆ ಮಾಹಿತಿ ನೀಡಿರುವ ಸಂವಿಧಾನ ತಜ್ಞರು, ರಾಜ್ಯಗಳಿಗೆ ಅಥವಾ ರಾಜ್ಯಸರ್ಕಾರಗಳಿಗೆ ಸಿಎಬಿಗೆ ಸಂಬಂಧಿಸಿದಂತೆ ನಿರ್ಣಾಯಕ ಪಾತ್ರವಿಲ್ಲ. ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳ ಸಿಎಂಗಳು ತೆಗೆದುಕೊಂಡಿರುವ ನಿರ್ಧಾರಗಳಿಗೆ ಕಾನೂನಾತ್ಮಕವಾಗಿ ಮಾನ್ಯತೆ ಇಲ್ಲ ಎಂದು ಹೇಳಿದ್ದಾರೆ.

Comments are closed.