
ಗುವಾಹಟಿ/ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದೆ. ಅಸ್ಸಾಂನ ದಿಬ್ರುಗಢ್ ನಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಆರ್ ಎಸ್ ಎಸ್ ಕಚೇರಿಯನ್ನು ಧ್ವಂಸಗೊಳಿಸಿ ಬೆಂಕಿಹಚ್ಚಿರುವ ಘಟನೆ ನಡೆದಿದೆ.
ಆರ್ ಎಸ್ ಎಸ್ ಕಚೇರಿಯ ಹೊರಭಾಗದಲ್ಲಿ ನಿಲ್ಲಿಸಿದ್ದ ನಾಲ್ಕು ಮೋಟಾರ್ ಬೈಕ್ ಗಳಿಗೂ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಅಸ್ಸಾಂನ ಹಲವೆಡೆ ಕರ್ಫ್ಯೂ ಹಾಗೂ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗುವಾಹಟಿ, ಸಿವಸಾಗರ್ ಮತ್ತು ಟಿನ್ ಸುಕಿಯಾ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪೊಲೀಸ್ ಗುಂಡಿನ ದಾಳಿಗೆ ಹಲವರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಚಿಟ್ ನಗರದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ರಾಹುಲ್ ದಾಸ್ ಎಂಬವರು ಗಾಯಗೊಂಡಿದ್ದು, ಅವರನ್ನು ಗುವಾಹಟಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ಸಾಂನಲ್ಲಿ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ ಐದು ಸಾವಿರ ಯೋಧರನ್ನು ರವಾನಿಸಲಾಗಿದೆ. ತ್ರಿಪುರಾಕ್ಕೆ ಮೂರು ಸಾವಿರ ಅಸ್ಸಾಂ ರೈಫಲ್ಸ್ ಯೋಧರನ್ನು ನಿಯೋಜಿಸಲಾಗಿದೆ. ಅಸ್ಸಾಂ, ತ್ರಿಪುರಾದಲ್ಲಿ ಇಂಟರ್ನೆಟ್, ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
Comments are closed.