
ಕೋಲ್ಕತಾ (ಪಶ್ಚಿಮ ಬಂಗಾಳ): ದೇಶಾದ್ಯಂತ ಈರುಳ್ಳಿ ಬೆಲೆ ಏರುತ್ತಲೇ ಇದೆ. ಏತನ್ಮಧ್ಯೆ, ನ್ಯಾಯಬೆಲೆ ಅಂಗಡಿಗಳ ಮೂಲಕ 59 ರೂ.ಗೆ/ಕೆಜಿ ಮಾರಾಟ ಮಾಡುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದೆ.
ದೇಶದ ಅನೇಕ ರಾಜ್ಯಗಳಲ್ಲಿ ಈರುಳ್ಳಿಯ ಬೆಲೆ ಏರುತ್ತಿದ್ದು, ಇದು ಜನರಲ್ಲಿ ಪ್ರತಿಭಟನೆಗೆ ನಾಂದಿ ಹಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಂಡಿರುವ ಪಶ್ಚಿಮ ಬಂಗಾಳ ಸರ್ಕಾರ ತರಕಾರಿ ಖರೀದಿಸುವಾಗ ಪ್ರತಿ ಕುಟುಂಬಕ್ಕೆ ಒಂದು ಕಿಲೋಗ್ರಾಂ ಈರುಳ್ಳಿ ನೀಡಲಾಗುವುದು ಎಂದು ಘೋಷಿಸಿದೆ.
ವಿವಿಧ ಸ್ಥಳಗಳಲ್ಲಿ, ಅಡಿಗೆಗೆ ಮುಖ್ಯವಾದ ತರಕಾರಿ ಬೆಲೆ 100 ರೂ. ಗಡಿದಾಟಿದೆ. ಸಿಲಿಕಾನ್ ಸಿಟಿ ಬೆಂಗಳೂರು, ತಮಿಳುನಾಡಿನ ಮಧುರೈನಂತಹ ಕೆಲವು ಸ್ಥಳಗಳಲ್ಲಿ ಈರುಳ್ಳಿ ದರಗಳು 200 ರೂ.ಗೆ ತಲುಪಿದೆ. ಮಂಗಳವಾರ, ಕೇಂದ್ರ ಸರ್ಕಾರವು ಈರುಳ್ಳಿಯ ದಾಸ್ತಾನು ಮಿತಿಯನ್ನು ಸಗಟು ವ್ಯಾಪಾರಿಗಳಿಗೆ 25 ಟನ್ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಐದು ಟನ್ ಎಂದು ಪರಿಷ್ಕರಿಸಿದೆ. ಆಮದು ಮಾಡಿಕೊಳ್ಳುವವರಿಗೆ ಈ ಸ್ಟಾಕ್ ಮಿತಿಗಳಿಂದ ವಿನಾಯಿತಿ ನೀಡಲಾಗುತ್ತದೆ.
ಭಾರತಕ್ಕೆ ವಾರ್ಷಿಕ 150 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಅಗತ್ಯವಿದ್ದು, ಕರ್ನಾಟಕವು 20.19 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಉತ್ಪಾದಿಸುತ್ತದೆ. ಬೆಳೆ ನಷ್ಟ ಮತ್ತು ಸುಗ್ಗಿಯ ನಂತರದ ನಷ್ಟದಿಂದಾಗಿ ಈರುಳ್ಳಿ ಉತ್ಪಾದನೆಯಲ್ಲಿ ಸುಮಾರು 50 ಪ್ರತಿಶತದಷ್ಟು ನಷ್ಟವಾಗಿರುವ ಕಾರಣ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿದೆ. ಹೀಗಾಗಿಯೇ ಈರುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
Comments are closed.