ರಾಷ್ಟ್ರೀಯ

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಾವು !

Pinterest LinkedIn Tumblr

ನವದೆಹಲಿ: ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.

ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಐದು ಮಂದಿ ಕಾಮುಕರು ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದರು. ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು.

ಶೇ.90ರಷ್ಟು ಸುಟ್ಟಗಾಯಗಳಾಗಿದ್ದ 23 ವರ್ಷದ ಸಂತ್ರಸ್ತೆಯನ್ನು ಉತ್ತರಪ್ರದೇಶದ ಲಖನೌನಿಂದ ದೆಹಲಿಗೆ ಕರೆತಂದು ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 11.40 ಸಮಯದಲ್ಲಿ ಹೃದಯ ಸ್ತಂಭನದಿಂದ ಸಂತ್ರಸ್ತೆ ಸಾವಿಗೀಡಾಗಿದ್ದಾಳೆ. ಆಕೆಯನ್ನು ರಕ್ಷಿಸಲು ಯತ್ನಿಸಿದ ಪ್ರಯತ್ನ ಕೈಗೂಡಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅತ್ಯಾಚಾರಿ ಆರೋಪಿಗಳು ಗುರುವಾರ ನಡೆಸಿದ ಪೈಶಾಚಿಕ ಕೃತ್ಯದ ಬಗ್ಗೆ ಸಂತ್ರಸ್ತೆ ಸಾವಿಗೂ ಮುನ್ನ ಪೊಲೀಸರಿಗೆ ಆಸ್ಪತ್ರೆಯಲ್ಲಿ ಮಾಹಿತಿ ನೀಡಿದ್ದಳು. ಗುರುವಾರ ರಾಯ್ ಬರೇಲಿ ಕೋರ್ಟ್ ನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ಇತ್ತು. ಅಲ್ಲಿಗೆ ತೆರಳಲು ರೈಲು ಏರಲೆಂದು ಮುಂಜಾನೆ 4 ಗಂಟೆ ವೇಳೆಗೆ ನಾನು ಮನೆಯಿಂದ ಹೊರಟಿದ್ದೆ. ಈ ವೇಳೆ ರಸ್ತೆಯಲ್ಲಿ ನನಗಾಗಿಯೇ ಕಾದು ನಿಂತಿದ್ದ ಐದೂ ಜನ ಮೊದಲು ನನ್ನನ್ನು ಅಡ್ಡಗಟ್ಟಿ ಮನಬಂದಂತೆ ದೂಷಣೆ ಮಾಡಿದರು. ಈ ವೇಳೆ ಒಬ್ಬ ನನ್ನ ಕಾಲಿಗೆ ಬಡಿಗೆಯಿದ ಬಲವಾಗಿ ಹೊಡೆದ.

ಆ ನೋವಿನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಬ್ಬ ಚಾಕುವಿನಿಂದ ನನ್ನ ಕುತ್ತಿಗೆ ಬಳಿ ಇರಿದ. ಇದಾದ ಬಳಿಕ ಅವರು ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಬೆಂಕಿ ಉರಿ ತಾಳಲಾಗದೇ ನಾನು ಆ ಸ್ಥಳದಿಂದ ಚೀರಾಡುತ್ತಾ ರಸ್ತೆಯಲ್ಲಿಯೇ ಸುಮಾರು ದೂರ ಓಡುತ್ತಾ ಹೋದೆ. ನನ್ನ ಕೂಗು ಕೇಳಿದ ಕೆಲ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಬಳಿಕ ಅವರೇ ಪೊಲೀಸರಿಗೆ ಕರೆ ಮಕಾಡಿ ಮಾಹಿತಿ ನೀಡಿದರು ಎಂದು ಸಂತ್ರಸ್ತೆ ತಿಳಿಸಿದ್ದರು.

ಐವರು ದಾಳಿಕೋರರ ಪೈಕಿ, ಶಿವಂ ತ್ರಿವೇದಿ ಎಂಬಾತ ಅತ್ಯಾಚಾರ ಪ್ರಮುಖ ಆರೋಪಿಯಾಗಿದ್ದು, ಐದು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮತ್ತೊಬ್ಬ ಅತ್ಯಾಚಾರ ಆರೋಪಿ ಶುಭಂ ತ್ರಿವೇದಿ ಕೂಡ ದಾಳಿ ನಡೆಸಿದ ಗುಂಪಿನಲ್ಲಿದ್ದು, ಈಗ ತಲೆ ಮರೆಸಿಕೊಂಡಿದ್ದಾನೆ ಎಂದೂ ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ.

Comments are closed.